×
Ad

ಕಳವಾಗಿದ್ದ ಶಿಶು ಶವವಾಗಿ ಪತ್ತೆ

Update: 2016-05-14 21:26 IST

 ಶಿವಮೊಗ್ಗ, ಮೇ 14: ಜಿಲ್ಲೆಯ ಭದ್ರಾವತಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕಳವು ಮಾಡಲಾಗಿದ್ದ ನವಜಾತ ಶಿಶುವು ಶವವಾಗಿ ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ದಿಗ್ಭ್ರಮೆ ಉಂಟು ಮಾಡಿದೆ. ಮಗುವನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ನಡುವೆ ಮಗು ಕಳವು ಮಾಡಿದವರ ಸುಳಿವು ಪೊಲೀಸರಿಗೆ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ. ಶುಕ್ರವಾರ ರಾತ್ರಿ ಭದ್ರಾವತಿ ಪಟ್ಟಣದ ಹಳೆ ಸೇತುವೆಯ ಕೆಳಭಾಗದಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪರಿಶೀಲನೆಯ ವೇಳೆ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಮಗು ಎಂದು ತಿಳಿದುಬಂದಿತ್ತು. ಪೋಷಕರು ಕೂಡ ಮಗುವಿನ ಗುರುತು ಪತ್ತೆ ಹಚ್ಚಿದ್ದಾರೆ. ಪಂಚನಾಮೆ ವಿಧಿವಿಧಾನ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಮಗುವಿನ ಶವವನ್ನು ಪೊಲೀಸರು ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಮೃತದೇಹವನ್ನು ಪೋಷಕರ ವಶಕ್ಕೆ ಒಪ್ಪಿಸಿದ್ದರು.

ಹತ್ಯೆ?:

ಆಸ್ಪತ್ರೆಯಿಂದ ಮಗುವನ್ನು ಕಳವು ಮಾಡಿದ ಆರೋಪಿಗಳು ಸೇತುವೆಯ ಮೇಲಿಂದ ಕೆಳಕ್ಕೆ ಎಸೆದು ಹೋಗಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ಮಗುವಿನ ತಲೆಯ ಭಾಗದಲ್ಲಿ ತೀವ್ರ ಸ್ವರೂಪದ ಗಾಯವಾಗಿರುವುದು ಕಂಡುಬಂದಿದ್ದು, ಇದರಿಂದಲೇ ಮಗು ಸಾವನ್ನಪ್ಪಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳುತ್ತಿವೆ. ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆಯು ಸವಾಲಾಗಿ ತೆಗೆದುಕೊಂಡಿತ್ತು. ಮಗುವಿನ ಸುಳಿವು ಪತ್ತೆಗೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಮೂರು ವಿಶೇಷ ಪೊಲೀಸ್ ತಂಡಗಳ ರಚನೆ ಮಾಡಿದ್ದರು. ಈ ತಂಡಗಳು ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಗು ಪತ್ತೆಗೆ ಕ್ರಮಕೈಗೊಂಡಿತ್ತು. ಘಟನೆ ಹಿನ್ನೆಲೆ:  

ಜೀವಿತಾ (25) ಎಂಬ ಮಹಿಳೆಯು ಕಳೆದ ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಭದ್ರಾವತಿಯ ಸರಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮವಿತ್ತಿದ್ದರು. ತಾಯಿ-ಮಗು ಆರೋಗ್ಯವಾಗಿದ್ದ ಕಾರಣದಿಂದ ರಾತ್ರಿ ಅವರನ್ನು ಆಸ್ಪತ್ರೆಯ ಜನರಲ್ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಇವರೊಂದಿಗೆ ಸಂಬಂಧಿ ಮಹಿಳೆಯೊಬ್ಬರಿದ್ದು, ರಾತ್ರಿ ವಾರ್ಡ್‌ನ ಹೊರಭಾಗದಲ್ಲಿ ಮಲಗಿಕೊಂಡಿದ್ದರು. ಮುಂಜಾನೆ ಸುಮಾರು 4 ಗಂಟೆಗೆ ಪಕ್ಕದಲ್ಲಿ ನಿದ್ರಿಸುತ್ತಿದ್ದ ಮಗು ಇಲ್ಲದಿರುವುದು ಕಂಡುಬಂದಿದೆ. 

Writer - -ಬಿ. ರೇಣುಕೇಶ್

contributor

Editor - -ಬಿ. ರೇಣುಕೇಶ್

contributor

Similar News