ವಿಜ್ಞಾನಕ್ಕೂ ಅಧ್ಯಾತ್ಮಕ್ಕೂ ಅವಿನಾಭಾವ ಸಂಬಂಧವಿದೆ: ಶ್ರೀ ಡಾ.ನಿರ್ಮಲಾನಂದನಾಥ
ಚಿಕ್ಕಮಗಳೂರು, ಮೇ 14: ಅಧ್ಯಾತ್ಮ ಎಂದರೆ ಒಂದು ಶಕ್ತಿ. ವಿಜ್ಞಾನಕ್ಕೂ ಅಧ್ಯಾತ್ಮಕ್ಕೂ ಅವಿನಾಭಾವ ಸಂಬಂಧವಿದೆ. ಅಧ್ಯಾತ್ಮವಿಲ್ಲದೆ ವಿಜ್ಞಾನವು ಬೆಳೆಯುವುದಿಲ್ಲ. ಧ್ಯಾನದ ಮೂಲವೇ ಅಧ್ಯಾತ್ಮ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿ ಹೇಳಿದ್ದಾರೆ.
ಅವರು ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾನಿಲಯದ ಅಂತಿಮ ವರ್ಷದ ಬಿಇ, ಎಂಟೆಕ್, ಎಂಬಿಎ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿ ಬಹಳಷ್ಟು ಸಕಾರಾತ್ಮಕ ಮತ್ತು ನಕಾರಾತ್ಮಕ ಸಂಗತಿಗಳಿರುತ್ತವೆ. ಸಕಾರಾತ್ಮಕ ಸಂಗತಿಗಳಿಗೆ ಮೊದಲ ಪ್ರಾಶಸ್ತ್ಯ ಮತ್ತು ಮನ್ನಣೆಯನ್ನು ಕೊಟ್ಟು ಮುಂದೆ ಸಾಗುವುದೇ ನಮ್ಮ ಜೀವನದ ಗುರಿಯಾಗಬೇಕು ಎಂದರು.
ಪದ್ಮವಿಭೂಷಣ ರಾಜರ್ಷಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಒಂದಕ್ಕೊಂದು ಪೂರಕ. ಆದರೆ ವಿಜ್ಞಾನ ಮತ್ತು ಅಧ್ಯಾತ್ಮವು ಬೆರೆತರೆ ಸಿಗುವ ಮೌಲ್ಯ ಹೆಚ್ಚು ಎಂದು ನುಡಿದರು.
ಬೆಂಗಳೂರು ಇಸ್ರೋ ಉಪಗ್ರಹ ಕೇಂದ್ರದ ನಿರ್ದೆಶಕ ಪದ್ಮಶ್ರೀ ಡಾ.ಎಂ.ಅಣ್ಣಾದುರೈ ಮಾತನಾಡಿದರು. ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಚಿಕ್ಕಮಗಳೂರು ಶಾಖೆಯ ಶ್ರೀ ಗುಣನಾಥಸ್ವಾಮಿ, ಹಾಸನ ಶಾಖೆಯ ಶ್ರೀ ಶಂಭುನಾಥಸ್ವಾಮಿ, ಹುಳಿಮಾವು ಶಾಖೆಯ ಶ್ರೀ ಶೈಲನಾಥ ಸ್ವಾಮಿ, ಆದಿಹಳ್ಳಿ ಮಠದ ಶ್ರೀ ಶಿವಪುತ್ರ ಸ್ವಾಮಿ, ಇಸ್ರೋ ಉಪಗ್ರಹ ಕೇಂದ್ರದ ವಿಜ್ಞಾನಿ ಡಾ.ಹಿರಿಯಣ್ಣ, ಅಸೋಸಿಯೇಟ್ ಪ್ರಾದ್ಯಾಪಕ ಬಸವರಾಜಪ್ಪ, ಸಾಯಿ ನಂದನ್, ಸಹ ಪ್ರಾಧ್ಯಾಪಕಿ ಅರ್ಪಿತಾ, ನಾಗವೇಣಿ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವೈಶಾಖ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಾದ್ಯಾಪಕ ಡಾ. ಸಿ.ಟಿ.ಜಯದೇವ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.