ಮಡಿಕೇರಿ: ‘ನಮ್ಮ ಮನೆ’ ಮೇಳಕ್ಕೆ ಚಾಲನೆ
ಮಡಿಕೇರಿ, ಮೇ 14: ವಸತಿ ಹೊಂದುವ ಪ್ರತಿಯೊಬ್ಬರ ಕನಸನ್ನು ನನಸು ಮಾಡುವ ಉದ್ದೇಶದಿಂದ ‘ನಮ್ಮ ಮನೆ’ ಶೀರ್ಷಿಕೆಯಡಿ ನಡೆಯುತ್ತಿರುವ ನಿವೇಶನ ನಿರ್ಮಾಣ ಹಾಗೂ ಒಳಾಂಗಣ ಪ್ರದರ್ಶನ ಮೇಳಕ್ಕೆ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಚಾಲನೆ ನೀಡಿದರು.
ನಗರದ ಜೂನಿಯರ್ ಕಾಲೇಜು ಆವರಣದ ಫೀ.ಮಾ.ಕಾರ್ಯಪ್ಪ ಆಡಿಟೋರಿಯಂ ನಲ್ಲಿ ಮೇ 16ರವರೆಗೆ ಮೇಳ ನಡೆಯುತ್ತಿದ್ದು, ನಿವೇಶನ ಮತ್ತು ಮನೆ ನಿರ್ಮಾಣದ ಕುರಿತು ಸೂಕ್ತ ಮಾಹಿತಿಯನ್ನು ನೀಡಲಾಗುತ್ತಿದೆ.
ಮೇಳದ ಆಯೋಜನಾ ಸಮಿತಿಯ ಅಧ್ಯಕ್ಷ ಹಾಗೂ ಮುಳಿಯ ಪ್ರತಿಷ್ಠಾನದ ಪ್ರಮುಖರಾದ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಪ್ರತಿಯೊಬ್ಬರಿಗೂ ವಸತಿ ನೀಡಬೇಕೆನ್ನುವ ಪ್ರಧಾನ ಮಂತ್ರಿ ಕನಸಿಗೆ ನಮ್ಮ ಮನೆ ಮೇಳವು ಪೂರಕವಾಗಿದ್ದು, ಯೋಜನೆ ಕಾರ್ಯಗತಗೊಳಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ವಸತಿ ರಹಿತ ಜನರ ಮಾಹಿತಿ ಹಾಗೂ ಆವಶ್ಯಕತೆಗಳ ಪಟ್ಟಿಯನ್ನು ಸರಕಾರಕ್ಕೆ ಒದಗಿಸುವುದು ಮೇಳದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಅಡುಗೆ ಮನೆಯ ತ್ಯಾಜ್ಯದಿಂದ ಗ್ಯಾಸ್ ಉತ್ಪಾದನೆ, ಮಳೆನೀರು ಸಂಗ್ರಹ ಹಾಗೂ ಉಪಯೋಗ ಮತ್ತು ಜಲ ಮರುಪೂರಣದ ಬಗ್ಗೆ ಮಾಹಿತಿ, ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡುವಂತಹ ಉಪನ್ಯಾಸ ಕಾರ್ಯಕ್ರಮಗಳು ಮೇಳದಲ್ಲಿ ನಡೆಯಲಿವೆ.
ಇದೇ ವೇಳೆ ಸಾರ್ವಜನಿಕರಿಗಾಗಿ ಉತ್ತಮ ಮನೆ ಎಂಬ ವಿಷಯದಡಿಯಲ್ಲಿ ವಿವಿಧ ಪ್ರಕಾರಗಳ ಮನೆಗಳ ಸ್ಪರ್ಧೆ, ಪುಟಾಣಿಗಳಿಗೆ ನಮ್ಮ ಮನೆ ಎಂಬ ಚಿತ್ರ ಸ್ಪರ್ಧೆ, ಇಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಟ್ ವಿದ್ಯಾರ್ಥಿಗಳಿಗೆ ಆಟೊ ಕ್ಯಾಡ್ ಡ್ರಾಯಿಂಗ್, 3ಡಿ ಡ್ರಾಯಿಂಗ್ ಸ್ಪರ್ಧೆಗಳು ನಡೆದವು.
ಪ್ರದರ್ಶಕರಾಗಿ ಹೌಸಿಂಗ್ ಲೋನ್ ನೀಡುವಂತಹ ಬ್ಯಾಂಕ್‌ಗಳು, ಟೈಲ್ಸ್, ಇಂಟೀರಿಯರ್ ಡೆಕೊರೇಟರ್ಸ್, ಮರದ ದಿಮ್ಮಿಗಳನ್ನ ಉಪಯೋಗಿಸಿ ಕಟ್ಟುವಂತಹ ಮನೆಗಳು, ಚಾವಣಿ ಸಂಬಂಧಿತ ಶೀಟ್ ಮತ್ತು ವಸ್ತುಗಳು, ಆಧುನಿಕ ಲೈಟಿಂಗ್ ಸಿಸ್ಟಮ್, ಹೋಮ್ ಥಿಯೇಟರ್ ಸಿಸ್ಟಮ್ಸ್, ಕಟ್ಟಡ ರಕ್ಷಣಾ ವ್ಯವಸ್ಥೆಗಳು, ಸಿಸಿಟಿವಿ, ಉದ್ಯಾನವನ ಸಾಮಗ್ರಿಗಳು, ಸೋರುವಿಕೆ ತಡೆಗಟ್ಟುವ ಸಾಧನಗಳು ಇನ್ನಿತರ ನಿವೇಶನ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಉದ್ಯಮಗಳ ಪ್ರದರ್ಶನ ನಡೆಯುತ್ತಿವೆ.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಬಂಗೇರ, ಮೂಡಾ ಅಧ್ಯಕ್ಷೆ ಸುರಯ್ಯ ಅಬ್ರಾರ್, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್, ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಕೆ ಅರುಣ್ ಕುಮಾರ್, ರೋಟರಿ ಮಿಸ್ಟಿಹಿಲ್ಸ್‌ನ ಅಧ್ಯಕ್ಷ ಸತೀಶ್ ಪೂಣಚ್ಚ, ಗುತ್ತಿಗೆದಾರ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷ ಎಂ.ಬಿ.ಜೋಯಪ್ಪ, ಸರಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಗುರುರಾಜ್, ಮೇಳ ಆಯೋಜನ ಸಮಿತಿಯ ಅಹ್ಮದ್ ಕಬೀರ್, ಮೋಂತಿ ಗಣೇಶ್, ಅಂಬೆಕಲ್ ನವೀನ್, ಕುಶಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.