ಶಿಥಿಲಾವಸ್ಥೆಯ ಓವರ್‌ಹೆಡ್ ಟ್ಯಾಂಕ್ ನೆಲಸಮ: ಗೂಡಂಗಡಿಗಳ ತೆರವು
ಶಿವಮೊಗ್ಗ, ಮೇ 14: ನಗರದ ಕುವೆಂಪು ರಸ್ತೆಯ ಜಿಲ್ಲಾ ಪಂಚಾಯತ್ ಕಚೇರಿಯ ಮುಂಭಾಗ ಶಿಥಿಲಾವಸ್ಥೆಯಲ್ಲಿದ್ದ ಓವರ್ ಹೆಡ್ ಟ್ಯಾಂಕ್ ನೆಲಸಮಗೊಳಿಸಲು ಮಹಾನಗರ ಪಾಲಿಕೆ ಆಡಳಿತ ಮುಂದಾಗಿದೆ. ಅದೇ ಸ್ಥಳದಲ್ಲಿ ನೂತನ ಟ್ಯಾಂಕ್ ನಿರ್ಮಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಟ್ಯಾಂಕ್ ಸಮೀಪವಿದ್ದ ಗೂಡಂಗಡಿಗಳನ್ನು ಬಿಗಿ ಪೊಲೀಸ್ ಪಹರೆಯಲ್ಲಿ ಪಾಲಿಕೆ ಆಡಳಿತ ತೆರವುಗೊಳಿಸಿತು. ಸುಮಾರು ಐದು ಗೂಡಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಜೆಸಿಬಿಯ ಮೂಲಕ ತೆರವುಗೊಳಿಸಲು ಮುಂದಾದರು. ಇದಕ್ಕೆ ಅಂಗಡಿ ಮಾಲಕರು ಆಕ್ಷೇಪ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದರು. ಅಂತಿಮವಾಗಿ ಸ್ವಯಂಪ್ರೇರಿತವಾಗಿ ಅಂಗಡಿ ಮಾಲಕರು ತಮ್ಮ ಗೂಡಂಗಡಿಗಳನ್ನು ತೆರವುಗೊಳಿಸಲು ಮುಂದಾದರು. ಸ್ಥಳಕ್ಕೆ ಪಾಲಿಕೆ ಕಾರ್ಯಪಾಲಕ ಅಭಿಯಂತರ ಪದ್ಮನಾಭ್, ಸಹಾಯಕ ಕಾರ್ಯಪಾಲಕ ಅಭಿಯಂತರ ಚಾಮರಾಜ್, ವಾರ್ಡ್ ಇಂಜಿನಿಯರ್ ಹಾಲೇಶಪ್ಪಮತ್ತವರ ಸಿಬ್ಬಂದಿ ಭೇಟಿನೀಡಿ ಪರಿಶೀಲನೆ ನಡೆಸಿದರು. ಹೊಸ ಟ್ಯಾಂಕ್:
ಈ ಟ್ಯಾಂಕ್ 2 ಲಕ್ಷ ಗ್ಯಾಲನ್ ನೀರು ಸಂಗ್ರಹಣೆಯ ಸಾಮರ್ಥ್ಯವುಳ್ಳದ್ದಾಗಿದೆ. ಆದರೆ ಈ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಟ್ಯಾಂಕ್ ತೆರವುಗೊಳಿಸಲು ನಿರ್ಧರಿಸಲಾಗಿದೆ. ಈ ಜಾಗದಲ್ಲಿ ಅಮೃತ್ ಯೋಜನೆಯಡಿ ಹೊಸ ಟ್ಯಾಂಕ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಚಾಮರಾಜ್‌ರವರು ಮಾಹಿತಿ ನೀಡಿದರು. ಈ ಟ್ಯಾಂಕ್ ಮೂಲಕ ನೀರು ಪೂರೈಕೆಯಾಗುವ ಬಡಾವಣೆಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಜಲ ಮಂಡಳಿಯವರು ಅಗತ್ಯ ಕ್ರಮಕೈಗೊಳ್ಳಲಿದ್ದಾರೆ. ನಾಗರಿಕರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರವಹಿಸಲಾಗುವುದು ಎಂದು ತಿಳಿಸಿದ್ದಾರೆ.