×
Ad

ತಿಂಗಳಾಂತ್ಯದೊಳಗೆ ಪೂರ್ಣ: ಚಂದ್ರಶೇಖರ್

Update: 2016-05-14 22:12 IST

ಸಾಗರ, ಮೇ 14: ಈ ತಿಂಗಳ ಅಂತ್ಯದೊಳಗೆ ಶರಾವತಿ ಹಿನ್ನೀರಿನಿಂದ ನಗರಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಕಾಮಗಾರಿ ಪೂರ್ಣಗೊಳ್ಳಲಿದ್ದು, ಜೂ. 15ರೊಳಗೆ ಘಟಕದ ಉದ್ಘಾಟನೆ ನಡೆಯಲಿದೆ ಎಂದು ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಜಿ.ಸಿ. ಚಂದ್ರಶೇಖರ್ ಹೇಳಿದರು.

 ಇಲ್ಲಿನ ವರದಹಳ್ಳಿಯಲ್ಲಿರುವ ನೀರು ಶುದ್ಧ್ದೀಕರಣ ಘಟಕಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪನವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

 ನಗರದಲ್ಲಿ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು 2010ರಲ್ಲಿ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. ಕಾಮಗಾರಿ ಮುಗಿಯಲು ಬೇರೆ ಬೇರೆ ಕಾರಣಗಳಿಂದಾಗಿ 2 ವರ್ಷ ವಿಳಂಬವಾೆಯಿತು.ಎಂದು ಹೇಳಿದರು. ವಿಧಾನಸಭಾಧ್ಯಕ್ಷರು ಮುತುವರ್ಜಿ ವಹಿಸಿದ್ದರಿಂದ ಕಾಮಗಾರಿ ಸಂದರ್ಭ ದಲ್ಲಿ ಎದುರಾದ ಅನೇಕ ಸಮಸ್ಯೆಗಳು ಸುಲಭವಾಗಿ ಬಗೆಹರಿಸಲ್ಪಟ್ಟವು. ಈಗಾಗಲೇ ಶುದ್ಧ ಕುಡಿಯುವ ನೀರು ಪ್ರಯೋಗಾರ್ಥವಾಗಿ ನಗರವ್ಯಾಪ್ತಿಯಲ್ಲಿ ಸರಬರಾಜು ಮಾಡಲಾಗುತ್ತಿದೆ. ದಿನದ 24 ಗಂಟೆ ಕುಡಿಯುವ ನೀರು ಪೂರೈಕೆಗೆ ಸಂಬಂಧಪಟ್ಟಂತೆ ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಮತ್ತಷ್ಟು ಕೆಲಸಗಳು ಬಾಕಿಯಿದ್ದು, ಅದಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಮುಂದಿನ ಒಂದು ವರ್ಷದಲ್ಲಿ ನಗರವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಪೂರ್ಣ ಗೊಳ್ಳಲಿದೆ. ಉದ್ದೇಶಿತ ಕಾಮಗಾರಿ 3 ವರ್ಷದಷ್ಟು ವಿಳಂಬವಾಗಿದೆ. ಉಳಿದ ಕಾಮಗಾರಿಗಳನ್ನು ಪೂರ್ಣ ಗೊಳಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

ಒಳಚರಂಡಿ ಕಾಮಗಾರಿಗೆ ಸಂಬಂಧಪಟ್ಟಂತೆ ಮನೆಮನೆ ಸಂಪರ್ಕಕ್ಕೆ 14 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧವಾಗಿದ್ದು, ಹಣ ಬಿಡುಗಡೆಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಭರವಸೆ ವ್ಯಕ್ತ ಪಡಿಸಿದರು.

ಒ ಳಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿಗೆ ಸಂಬಂಧಪಟ್ಟಂತೆ ಕಳಪೆ ಕಾಮಗಾರಿ, ಅಧಿಕಾರಿಗಳ ನಿರ್ಲಕ್ಷ್ಯ ಇನ್ನಿತರ ಲೋಪಗಳು ಕಂಡು ಬಂದರೆ ಮಂಡಳಿಯ ದರ ರಹಿತ ದೂರವಾಣಿ ಸಂಖ್ಯೆ 080-40001000ಕ್ಕೆ ಕರೆ ಮಾಡಿದರೆ 24 ಗಂಟೆಯೊಳಗೆ ಪರಿಹಾರ ಕಲ್ಪಿಸಲಾಗುತ್ತದೆ ಎಂದರು.

ಹೊಸನಗರ ನಗರವ್ಯಾಪ್ತಿಯಲ್ಲಿ ಮುಂದಿನ 40 ವರ್ಷಗಳ ಮುಂದಾಲೋಚನೆಯನ್ನು ಇರಿಸಿ ಕೊಂಡು 55 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರನ್ನು ಪೂರೈಕೆ ಮಾಡುವ ಯೋಜನೆಗೆ ಮರು ಪಟ್ಟಿ ತಯಾರಿಸಿ, ಸರಕಾರಕ್ಕೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ ಎಂದರು. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ, ಸರಕಾರ ಅನ್ನಭಾಗ್ಯ, ಕ್ಷೀರಭಾಗ್ಯ ದಂತೆಯೇ ಶುದ್ಧ ಕುಡಿಯುವ ನೀರಿನ ಭಾಗ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News