ಜೈಲು-ಜಾಮೀನು ಇಲ್ಲದ ಕಳಂಕರಹಿತ ಆಡಳಿತ ತೃಪ್ತಿ ತಂದಿದೆ: ಸಿದ್ದರಾಮಯ್ಯ
‘ಅನುದಾನ ಸದ್ಬಳಕೆ ಬಗ್ಗೆ ವೌಲ್ಯಮಾಪನ’
ಬೆಂಗಳೂರು, ಮೇ 14: ರಾಜ್ಯ ಸರಕಾರ ಮೂರು ವರ್ಷ ಭ್ರಷ್ಟಾಚಾರ ಮುಕ್ತ, ಕಳಂಕ ರಹಿತ, ಜೈಲು-ಜಾಮೀನು ಇಲ್ಲದೆ, ಜನಪರ ಆಡಳಿತ ನೀಡಿರುವುದು ತನಗೆ ತೃಪ್ತಿ ತಂದಿದೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿವಿಧ ಇಲಾಖೆಗಳು ವೆಚ್ಚ ಮಾಡಿರುವ ಅನುದಾನದ ಸದ್ಬಳಕೆ ಬಗ್ಗೆ ವೌಲ್ಯಮಾಪನ ಮಾಡಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಮೊದಲು ನೀಡಿದ್ದ 165 ಆಶ್ವಾಸನೆಗಳ ಪೈಕಿ 120ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿ, ‘ನುಡಿದಂತೆ ನಡೆದಿದ್ದೇವೆ’ ಎಂಬ ಹೆಮ್ಮೆ ತನ್ನ ನೇತೃತ್ವದ ಸರಕಾರಕ್ಕಿದೆ ಎಂದು ಹೇಳಿದರು.
ಕೆಲ ಕ್ಷುಲ್ಲಕ ರಾಜಕೀಯ ಪ್ರೇರಿತ ಆರೋಪಗಳನ್ನು ಹೊರತುಪಡಿಸಿದರೆ, ಕಳಂಕ ಮುಕ್ತ ಜನಪರ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ವಿಪಕ್ಷಗಳ ಎಲ್ಲ ಆರೋಪಗಳು ಆಧಾರ ರಹಿತ. ಹೀಗಾಗಿ ನಮಗೆ ಯಾವುದೇ ಅಳುಕು-ಅಂಜಿಕೆಯೇ ಇಲ್ಲ ಎಂದು ನುಡಿದರು.
ನಮ್ಮ ಸರಕಾರದ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಹೀಗಿರುವಾಗ ಬಿಜೆಪಿಯ ‘ಚಾರ್ಜ್‌ಶೀಟ್’ ರಾಜಕೀಯ ಪ್ರೇರಿತ. ಯಡಿಯೂರಪ್ಪ ಭ್ರಮೆಯಲ್ಲಿ ‘ಸಿದ್ದರಾಮಯ್ಯ ಕಾಂಗ್ರೆಸ್ ಸರಕಾರದ ಕೊನೆಯ ಮುಖ್ಯಮಂತ್ರಿ’ ಎಂದು ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆಶೀರ್ವಾದದಿಂದ 2018ರ ವಿಧಾನಸಭಾ ಚುನಾವಣೆ ತನ್ನ ನೇತೃತ್ವದಲ್ಲಿ ನಡೆಯಲಿದೆ. ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ರಾಜ್ಯದ ಜನತೆ ನಿರ್ಧರಿಸಿದ್ದಾರೆ. ಆದುದರಿಂದ ಬಿಜೆಪಿ-ಜೆಡಿಎಸ್ ಮುಖಂಡರುಗಳು ಭ್ರಮೆಯಲ್ಲಿರುವುದು ಬೇಡ ಎಂದು ತಿರುಗೇಟು ನೀಡಿದರು.
ವೆಚ್ಚ ದ್ವಿಗುಣ: ಬಿಜೆಪಿಯ ಐದು ವರ್ಷಗಳ ಆಡಳಿತಾವಧಿಯಲ್ಲಿ ವೆಚ್ಚ ಮಾಡಿದ್ದಕ್ಕೆ ಎರಡು ಪಟ್ಟು ಹೆಚ್ಚಿನ ಮೊತ್ತವನ್ನು ರಾಜ್ಯ ಸರಕಾರ ಕೇವಲ ಮೂರೇ ವರ್ಷಗಳಲ್ಲಿ ವೆಚ್ಚ ಮಾಡಿದೆ ಎಂದ ಸಿದ್ದರಾಮಯ್ಯ, ಅಭಿವೃದ್ಧಿ ಕಾರ್ಯಗಳಲ್ಲಿ ನಮ್ಮ ಸರಕಾರ ಅತ್ಯಂತ ಮುಂದಿದೆ ಎಂದು ಹೇಳಿದರು.
ಬಿಜೆಪಿ ಸರಕಾರ 5 ವರ್ಷಗಳಲ್ಲಿ 3.39ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದು, ರಾಜ್ಯ ಸರಕಾರ ಕೇವಲ 3 ವರ್ಷಗಳಲ್ಲಿ 4.13ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಿದೆ ಎಂದ ಅವರು, ಬಿಜೆಪಿ ಆಡಳಿತಾವಧಿಯಲ್ಲಿ ಬಡವರಿಗೆ ಬಿಪಿಎಲ್ ಕಾರ್ಡ್ ನೀಡಲೂ ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸರಕಾರದ ಮಹತ್ವಾಕಾಂಕ್ಷಿಯ ಕ್ಷೀರಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ಕೃಷಿಭಾಗ್ಯ, ಮೈತ್ರಿ, ಮನಸ್ವಿನಿ, ನಿರ್ಮಲ ಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆಗಳು ಅತ್ಯಂತ ಯಶಸ್ವಿಯಾಗಿವೆ ಎಂದ ಸಿದ್ದರಾಮಯ್ಯ, ರಾಜ್ಯ ಸರಕಾರ ರೂಪಿಸಿದ ಹಲವು ಯೋಜನೆಗಳನ್ನು ಕೇಂದ್ರ ಸರಕಾರ ಅಳವಡಿಸಿಕೊಂಡಿದೆ ಎಂದು ಉದಾಹರಿಸಿದರು.
ಕೃಷಿ ಭಾಗ್ಯ ಯೋಜನೆಯಡಿ ರಾಜ್ಯದಲ್ಲಿ 65 ಸಾವಿರ ಕೃಷಿ ಹೊಂಡ ತೆಗೆಯಲಾಗಿದ್ದು ಇದರಿಂದ 70ಸಾವಿರ ಫಲಾನುಭವಿ ರೈತರಿಗೆ ಅನುಕೂಲವಾಗಿದೆ. ರೈತರಿಗೆ ಅತ್ಯಂತ ಪ್ರಿಯವಾದ ಯೋಜನೆಯಿದು ಎಂದು ಶ್ಲಾಘಿಸಿದ ಅವರು, 3ವರ್ಷಗಳಲ್ಲಿ 8.50ಲಕ್ಷ ಮನೆ ನಿರ್ಮಾಣ ಮಾಡಿದ್ದು, 32 ಸಾವಿರ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಬಯಲು ಶೌಚ ಮುಕ್ತ: ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಭಾರತ ದೇಶದಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿದ್ದು, 2018ರ ವೇಳೆಗೆ ‘ಬಯಲು ಬಹಿರ್ದೆಸೆ ಮುಕ್ತ ರಾಜ್ಯ’ವನ್ನಾಗಿ ಘೋಷಿಸುವತ್ತ ನಮ್ಮ ಸರಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದು ಅವರು ಘೋಷಿಸಿದರು.
ವಿತ್ತೀಯ ಶಿಸ್ತಿನ ವ್ಯಾಪ್ತಿಯಲ್ಲಿ ರಾಜ್ಯ ಸರಕಾರ ಸಾಲವನ್ನು ಮಾಡಿದ್ದು, ಸಂಪನ್ಮೂಲ ಕ್ರೋಡೀಕರಣಕ್ಕೆ ವಿಶೇಷ ಆಸ್ಥೆ ವಹಿಸಲಾಗಿದೆ. ರಾಜ್ಯವನ್ನು ಸಾಲದ ಸುಳಿಗೆ ತಳ್ಳಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿದೆ ಎಂದು ಅವರು ವಿವರ ನೀಡಿದರು.
ಬೆಂಗಳೂರು ನಗರದ ಅಭಿವೃದ್ಧಿಗೆ 6 ಸಾವಿರ ಕೋಟಿ ರೂ.ಗಳನ್ನು ಅನುದಾನ ನೀಡಿದ್ದು, ನಮ್ಮ ಮೆಟ್ರೊ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ ಎಂದ ಅವರು, ನಗರದ ಮೂಲ ಸೌಲಭ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು.