ಮಗು ಹತ್ಯೆ ಪ್ರಕರಣ: ಶಂಕಿತ ವ್ಯಕ್ತಿಗಳ ವಿಚಾರಣೆ
ಶಿವಮೊಗ್ಗ,ಮೇ15: ಭದ್ರಾವತಿ ಸರಕಾರಿ ಆಸ್ಪತ್ರೆಯಿಂದ ಕಳವು ಮಾಡಿದ್ದ ನವಜಾತ ಶಿಶುವಿನ ಹತ್ಯೆ ಪ್ರಕರಣ ಇದೀಗ ಇಡೀ ರಾಜ್ಯದ ಗಮನ ಸೆಳೆದಿದೆ. ಜಿಲ್ಲಾ ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡಿದ್ದು, ತನಿಖೆ ತೀವ್ರಗೊಳಿಸಿದೆ. ಕೆಲ ಶಂಕಿತ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಮತ್ತೊಂದೆಡೆ ಇಷ್ಟರಲ್ಲಿಯೇ ಪ್ರಕರಣದ ಆರೋಪಿಗಳನ್ನು ಸೆರೆ ಹಿಡಿಯುವ ವಿಶ್ವಾಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳವು ಮಾಡಲಾಗಿದ್ದ ಮಗು ಶವವಾಗಿ ಸಿಕ್ಕಿದೆ. ಈ ಪ್ರಕರಣದ ಹಿಂದಿರುವ ಆರೋಪಿಗಳ ಪತ್ತೆಗೆ ತನಿಖೆ ತೀವ್ರಗೊಳಿಸಲಾಗಿದೆ. ವಿವಿಧ ದಿಕ್ಕುಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಈಗಾಗಲೇ ಈ ನಿಟ್ಟಿನಲ್ಲಿ ಕೆಲ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ಇಷ್ಟರಲ್ಲಿಯೇ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ. ರವಿವಾರ ದೂರವಾಣಿಯಲ್ಲಿ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸದ್ಯಕ್ಕೆ ಮಗು ಸಾವನ್ನಪ್ಪಿದ್ದು, ಹೇಗೆ ಎಂಬುದರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಮರಣೋತ್ತರ ಪರೀಕ್ಷೆ ಹಾಗೂ ಫೋರೋನಿಕ್ಸ್ ಲ್ಯಾಬ್ ವರದಿ ಕೈ ಸೇರಿದ ನಂತರ ಸಾವಿಗೆ ಕಾರಣವಾದ ಅಂಶಗಳು ಗೊತ್ತಾಗಲಿವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ತನಿಖೆ ತೀವ್ರ: ಆಸ್ಪತ್ರೆಯಿಂದ ಮಗು ಅಪಹರಿಸಿದ್ದ ವೇಳೆ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣದಡಿ ಕೇಸ್ ದಾಖಲಾಗಿತ್ತು. ಆದರೆ ಮಗುವು ಹಳೆ ಭದ್ರಾ ಸೇತುವೆ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ನಂತರ ಕೊಲೆ ಪ್ರಕರಣದಡಿ ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮಗು ಅಪಹರಣ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಸ್ಪಿ ರವಿ ಡಿ. ಚೆನ್ನಣ್ಣನವರ್‌ರವರು ಮೂರು ವಿಶೇಷ ಪೊಲೀಸ್ ತಂಡಗಳ ರಚನೆ ಮಾಡಿದ್ದರು. ಇದೀಗ ಈ ತಂಡಗಳು ತನಿಖೆ ಚುರುಕುಗೊಳಿಸಿವೆ. ಪಟ್ಟಣದ ಪ್ರಮುಖ ಸ್ಥಳಗಳಲ್ಲಿರುವ ಸಿ. ಸಿ. ಕ್ಯಾಮರಾದ ದೃಶ್ಯಾವಳಿಗಳನ್ನು ಸಂಗ್ರಹಿಸಿ ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿವೆ. ಘಟನೆ ಹಿನ್ನೆಲೆ:
ಜೀವಿತಾ (25) ಎಂಬ ಮಹಿಳೆಯು ಕಳೆದ ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಭದ್ರಾವತಿಯ ಸರಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿ-ಮಗು ಆರೋಗ್ಯವಾಗಿದ್ದ ಕಾರಣದಿಂದ ರಾತ್ರಿ ಅವರನ್ನು ಆಸ್ಪತ್ರೆಯ ಜನರಲ್ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ ಬುಧವಾರ ಮುಂಜಾನೆ 5 ಗಂಟೆಗೆ ತಾಯಿ ಪಕ್ಕದಲ್ಲಿ ನಿದ್ರಿಸುತ್ತಿದ್ದ ಮಗುವನ್ನು ಅಪಹರಣ ಮಾಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೆೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಗು ಪತ್ತೆಗೆ ಮೂರು ವಿಶೇಷ ಪೊಲೀಸ್ ತಂಡಗಳ ರಚನೆ ಮಾಡಲಾಗಿತ್ತು. ಮತ್ತೊಂದೆಡೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಸರಕಾರಿ ಆಸ್ಪತ್ರೆಯ 5 ಸಿಬ್ಬಂದಿಯನ್ನು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಸಸ್ಪೆಂಡ್‌ಗೊಳಿಸಿದ್ದರು.