×
Ad

ಮಡಿಕೇರಿ: ಗಾಳಿ, ಮಳೆಯಿಂದ ಅಪಾರ ನಷ್ಟ

Update: 2016-05-15 21:18 IST

ಮಡಿಕೇರಿ,ಮೇ.15: ಮಡಿಕೇರಿ ಸುತ್ತಮುತ್ತ ಶನಿವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಅಪಾರ ನಷ್ಟ ಉಂಟಾಗಿದೆ. ಮನೆಗಳು ಹಾಗೂ ಕಚೇರಿಗಳ ಮೇಲ್ಛಾವಣಿ ಮೀಟರುಗಟ್ಟಲೆ ದೂರ ಹಾರಿದ ಘಟನೆ ನಗರದಲ್ಲಿ ನಡೆದಿದೆ.

ಹಾಕತ್ತೂರಿನಲ್ಲಿ ಸಂಜೆ ಸುರಿದ ಮಳೆಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿ ಅಪಾರ ನಷ್ಟ ಸಂಭವಿಸಿದ ಬೆನ್ನಲ್ಲೇ ರಾತ್ರಿ ಮಡಿಕೇರಿ ಸುತ್ತಮುತ್ತ ಮಳೆ ಸಹಿತ ಬಿರುಗಾಳಿ ಬೀಸಿತು. ನಗರದ ಭಗವತಿ ನಗರ, ತ್ಯಾಗರಾಜ ಕಾಲನಿ, ಉಕ್ಕುಡ, ಕರ್ಣಂಗೇರಿ, ಅಬ್ಬಿಫಾಲ್ಸ್ ರಸ್ತೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸುತ್ತಮುತ್ತ ಭಾರೀ ಗಾಳಿಗೆ ಮನೆ ಮತ್ತು ಕಚೇರಿಯ ಮೇಲ್ಛಾವಣಿಗಳು ಹಾರಿ ನಷ್ಟ ಸಂಭವಿಸಿದೆ. ವಿವಿಧ ಬಡಾವಣೆಗಳಲ್ಲಿ 10 ಕ್ಕೂ ಹೆಚ್ಚಿನ ಮನೆಗಳ ಹೆಂಚು ಹಾಗೂ ಸಿಮೆಂಟ್‌ನ ಶೀಟ್‌ಗಳು ಒಡೆದು ಹೋಗಿವೆ. ಈ ಘಟನೆಯಿಂದ ಮನೆಯೊಳಗಿನ ಪೀಠೋಪಕರಣಗಳು ಹಾಗೂ ಇತರ ವಸ್ತುಗಳು ಜಖಂಗೊಂಡಿವೆ. ಕೆಲವು ಮನೆಗಳು ಮತ್ತು ವಿದ್ಯಾರ್ಥಿಗಳ ವಸತಿ ನಿಲಯಗಳ ಸೋಲಾರ್ ವ್ಯವಸ್ಥೆಗಳಿಗೂ ಹಾನಿಯಾಗಿದೆ. ಸಾಯಿ ಹಾಸ್ಟೆಲ್‌ನಲ್ಲೂ ನಷ್ಟ ಸಂಭವಿಸಿದೆ.ಎಸ್ಪಿ ಕಚೇರಿಯ ಮೇಲ್ಛಾವಣಿ ಮೀಟರ್‌ಗಟ್ಟಲೆ ದೂರ ಹಾರಿ ಬಿದ್ದ ಘಟನೆ ನಡೆದಿದೆ. ಅಬ್ಬಿಫಾಲ್ಸ್ ರಸ್ತೆಯಲ್ಲಿ ಒಂದೆರಡು ಮರಗಳು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ.

ಶನಿವಾರ ರಾತ್ರಿ ಸಂಭವಿಸಿದ ಈ ಅನಿರೀಕ್ಷಿತ ಘಟನೆಯಿಂದ ನಷ್ಟಕ್ಕೊಳಗಾದ ನಿವಾಸಿಗಳು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನಗರಸಭೆ ಅಧಿಕಾರಿಗಳ ಭೇಟಿ :

ಗಾಳಿಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ನಗರಸಭಾ ಅಧ್ಯಕ್ಷೆ ಬಂಗೇರ ಹಾಗೂ ಪೌರಾಯುಕ್ತರಾದ ಪುಷ್ಪಾವತಿ ಭೇಟಿ ನೀಡಿ ನಿವಾಸಿಗಳಿಗೆ ಸಾಂತ್ವನ ಹೇಳಿದರು. ಪರಿಹಾರ ನೀಡುವ ಕುರಿತು ನಷ್ಟದ ಅಂದಾಜು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಸದ್ಯದಲ್ಲಿಯೇ ಮಳೆಗಾಲವೂ ಆರಂಭಗೊಳ್ಳು ವುದರಿಂದ ಎತ್ತರದ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧ್ಯಕ್ಷೆ ಬಂಗೇರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News