×
Ad

ದೇವರಾಜ ಅರಸ್‌ರ ಕನಸು ನನಸಾಗಿಸುವ ಹೊಣೆಗಾರಿಕೆ ನಮ್ಮದು: ಕಾಗೋಡು ತಿಮ್ಮಪ್ಪ

Update: 2016-05-15 21:36 IST

ಸಾಗರ, ಮೇ 15: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಕನಸನ್ನು ನನಸು ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ಇಲ್ಲಿನ ಕಾಗೋಡು ತಿಮ್ಮಪ್ಪರಂಗಮಂದಿರದಲ್ಲಿ ಶನಿವಾರ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ದೇವರಾಜ ಅರಸು ಜನ್ಮಶತಮಾನೋತ್ಸವ ಅಂಗವಾಗಿ ಬೆಂಗಳೂರಿನ ತಂಡ ಹಮ್ಮಿಕೊಂಡಿದ್ದ ೞಅರಸು-ಕನಸುೞನಾಟಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಾಗರ ತಾಲೂಕು ಹೋರಾಟದ ಭೂಮಿ. ಭೂಹೀನರಿಗೆ ಭೂಮಿ ದೊರಕಿಸಿಕೊಡುವ ಹೋರಾಟಕ್ಕೆ ಫಲಶುೃತಿ ನೀಡಿದ ಹೆಗ್ಗಳಿಕೆ ಅರಸು ಅವರಿಗೆ ಸಲ್ಲುತ್ತದೆ. ದೇವರಾಜ ಅರಸು ಅವರು ಗೇಣಿರೈತರನ್ನು ಉಳುವ ಯೋಗಿಯಾಗಿ ಮಾಡುವಲ್ಲಿ ನೀಡಿದ ಸಹಕಾರವನ್ನು ಯಾರೂ ಮರೆಯುವಂತಿಲ್ಲ. ಭೂಸುಧಾರಣಾ ಕಾಯ್ದೆ ಮತ್ತು ಹಾವನೂರು ಕಮೀಷನ್ ರಚಿಸಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ತಂದು ಕೊಟ್ಟಿರುವುದು ಇತಿಹಾಸ ಪುಟದಲ್ಲಿ ದಾಖಲಿಸು ವಂತಹದ್ದು ಎಂದರು. 1972ರಲ್ಲಿ ನಾನು ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದೆ. ಆಗ ದೇವರಾಜ ಅರಸು ಅವರು ಮುಖ್ಯ ಮಂತ್ರಿಯಾಗಿದ್ದರು. ಅಲ್ಲಿಯ ವರೆಗೆ ಅರಸು ಅವರ ಜೊತೆ ಅಷ್ಟೊಂದು ನಿಕಟವಾದ ಸಂಪರ್ಕ ನನಗೆ ಇರಲಿಲ್ಲ. ಭೂಸುಧಾರಣಾ ಕಾಯ್ದೆ ಅನುಷ್ಠಾನಕ್ಕೆ ಬರಬೇಕು ಎನ್ನುವ ನನ್ನ ಕನಸಿಗೆ ಒತ್ತು ನೀಡಿದವರು ಅರಸುರವರು ಎಂದು ನೆನಪಿಸಿಕೊಂಡರು.

ಸದನದಲ್ಲಿ ಕಾಯ್ದೆ ಕುರಿತು ಚರ್ಚೆ ಅವಕಾಶ ಕಲ್ಪಿಸಿ, ನನ್ನನ್ನು ಭೂಸುಧಾರಣಾ ಕಾಯ್ದೆ ಅನುಷ್ಠಾನಕ್ಕೆ ರಚಿಸಿದ್ದ ಸಮಿತಿಯ ಸೆನೆಟ್ ಆಗಿ ನೇಮಕ ಮಾಡಿದರು ಎಂದು ತಿಳಿಸಿದರು. ಹಿಂದುಳಿದ ವರ್ಗ ಸ್ವಾಭಿಮಾನದ ಬದುಕು ನಡೆಸುತ್ತಿರುವುದಕ್ಕೆ ಅರಸು ಅವರು ಕಾರಣ ಎಂದರು.

ಅಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಬೇಕು ಎಂದ

ು ಯೋಚಿಸಿರಲಿಲ್ಲ. ಈ ಸಂದರ್ಭದಲ್ಲಿ ಅರಸು ಅವರು ಹಾವನೂರು ವರದಿ ಯಾಧರಿಸಿ ಮೀಸಲಾತಿ ನೀಡುವ ಕೆಲಸ ಮಾಡಿದ್ದಾರೆ. ಇದರಿಂದ ಹಿಂದುಳಿದ ವರ್ಗಕ್ಕೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮಾನತೆ ಸಿಗುವಂತಾಯಿತು ಎಂದರು. ಉಪವಿಭಾಗಾಧಿಕಾರಿ ಡಿ.ಎಂ. ಸತೀಶ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಲಕ್ಷ್ಮ್ಯಾ ನಾಯ್ಕಾ, ತಹಶೀಲ್ದಾರ್ ಎನ್.ಟಿ. ಧರ್ಮೋ ಜಿರಾವ್, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ರವಿ, ಜಿಲ್ಲಾ ಪಂಚಾಯತ್ ಸದಸ್ಯರಾದ ರಾಜಶೇಖರ ಗಾಳಿಪುರ, ಕಾಗೋಡು ಅಣ್ಣಪ್ಪ, ತಾಲೂಕು ಪಂಚಾಯತ್ ಸದಸ್ಯರಾದ ರಘಪತಿ ಭಟ್, ಕಲಸೆ ಚಂದ್ರಪ್ಪ, ದೇವೇಂದ್ರಪ್ಪ, ಸವಿತಾ ನಟರಾಜ್ ಉಪಸ್ಥಿತರಿದ್ದರು.

 ಬಳಿಕ ಬೆಂಗಳೂರಿನ ರಂಗತಂಡದಿಂದ ಅಭಿಲಾಷ ಎಸ್. ರಚಿಸಿರುವ, ಪ್ರಮೋದ್ ಶಿಗ್ಗಾವ್ ನಿರ್ದೇಶಿಸಿರುವ, ರಾಮಚಂದ್ರ ಹಡಪದ ಸಂಗೀತ ನೀಡಿರುವ ೞಅರಸು-ಕನಸುೞನಾಟಕ ಪ್ರದರ್ಶಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News