‘ಸುಡು ಬಿಸಿಲಿಗೆ ಸಾಯುತ್ತಿವೆ ಅಡಿಕೆ ಮರಗಳು’
ಸಾಗರ, ಮೇ 15: ವಿಪರೀತ ಬಿಸಿಲಿನಿಂದ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಅಡಿಕೆ ಮರಗಳು ಪೂರ್ಣ ಸಾಯುವ ಸ್ಥಿತಿಗೆ ತಲುಪಿದೆ. ಕಳೆದ 50 ವರ್ಷಗಳಿಂದಲೂ ಇಂತಹ ಸ್ಥಿತಿ ಉದ್ಭವಿಸಿರಲಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಅಡಿಕೆ ಬೆಳೆಗಾರರು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.
ತಾಲೂಕಿನ ವಿವಿಧ ಭಾಗಗಳಲ್ಲಿ ಬಿಸಿಲಿನಿಂದ ಹಾನಿಗೀಡಾಗಿರುವ ಅಡಿಕೆ ತೋಟಗಳಿಗೆ ಶನಿವಾರ ಭೇಟಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಬೆಳೆಗಾರರು ಅಡಿಕೆ ಫಸಲನ್ನು ಕಳೆದುಕೊಳ್ಳುವ ಜೊತೆಗೆ ಸಾಯುತ್ತಿರುವ ಮರವನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ. ಇಂತಹ ತುರ್ತು ಸಂದರ್ಭದಲ್ಲಿ ತಾಲೂಕು ಆಡಳಿತ ಬೆಳೆಗಾರರ ಪರವಾಗಿ ನಿಲ್ಲಲಿದೆ ಎಂದು ರೈತರಿಗೆ ಅಭಯ ನೀಡಿದರು. ಬೆಳೆ ಹಾಗೂ ಮರಗಳನ್ನು ಕಳೆದುಕೊಂಡ ರೈತರು ತಕ್ಷಣ ಫೋಟೋ ಸಹಿತ ತಹಶೀಲ್ದಾರ್ ಕಚೇರಿಗೆ ಹಾಗೂ ತೋಟಗಾರಿಕೆ ಇಲಾಖೆಗೆ ಮನವಿ ಸಲ್ಲಿಸಬೇಕು. ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಅಡಿಕೆ ಬೆಳೆಯುವ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ ನಷ್ಟದ ಅಂದಾಜು ತಯಾರಿಸ ಬೇಕೆಂದರು.
ತಾಲೂಕಿನ ಬಹುತೇಕ ಆವಿನಹಳ್ಳಿ, ಕಸಬಾ, ಆನಂದಪುರಂ, ತಾಳಗುಪ್ಪಹೋಬಳಿಗಳ ಸಾವಿರಾರು ಎಕರೆ ಅಡಿಕೆ ತೋಟಗಳು ನಾಶದ ಅಂಚಿಗೆ ಬಂದು ನಿಂತಿದೆ. ಈ ಭಾಗಗಳಲ್ಲಿ ಬೆಳೆಗಾರರು ನೀರಿನ ಕೊರತೆ ಯಿಂದ ಅಡಿಕೆ ತೋಟ ನಾಶವಾದ ಬಗ್ಗೆ ದೂರುಗಳನ್ನು ಸಲ್ಲಿಸಿದ್ದಾರೆ. ವಾತಾವರಣ ಇದೇ ರೀತಿ ಮುಂದುವರಿದರೆ ಮುಂದಿನ ಬೆಳೆಯಲ್ಲಿ ಶೇ. 50ರಷ್ಟು ನಷ್ಟವಾಗುವ ಸಾಧ್ಯತೆ ಇದೆ. ಈ ಬಗ್ಗೆ ಬೆಳೆಗಾರರಲ್ಲಿ ಆತ್ಮಸ್ಥೈರ್ಯ ತುಂಬಲಾಗುತ್ತಿದೆ ಎಂದರು. ಮರ ಹಾಗೂ ಬೆಳೆ ನಾಶವಾದ ಬಗ್ಗೆ ಅಧಿಕಾರಿಗಳು ವರದಿ ನೀಡಿದ ತಕ್ಷಣ ಅದನ್ನು ಶಾಸಕರ ಗಮನಕ್ಕೆ ತಂದು, ಸರಕಾರದಿಂದ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗುವುದು. ಸಾಗರ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಈಗಾಗಲೆ ಕಂದಾಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಿ.ಕೆ.ತಿಮ್ಮಪ್ಪ, ಸಹಾಯಕ ರಮೇಶ್ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.