ಪರಿಸರ ಸ್ವಚ್ಛತೆಯ ಪರಿಕಲ್ಪನೆ ಅಗತ್ಯ: ಚಂದ್ರಶೇಖರ್
ಸಾಗರ, ಮೇ 15: ನಾವು ನಾಗರಿಕತೆ ಸೋಗಿನಲ್ಲಿ ಅನಾಗರಿಕರಾಗಿ ಬದುಕುತ್ತಿದ್ದೇವೆ. ವೈಯಕ್ತಿಕ ಸ್ವಚ್ಛತೆ ಜೊತೆಗೆ ನಮ್ಮ ಪರಿಸರವನ್ನೂ ಸ್ವಚ್ಛವಾಗಿರಿಸಿಕೊಳ್ಳುವ ಕಲ್ಪನೆ ನಮ್ಮಲ್ಲಿ ಇನ್ನೂ ಜಾಗೃತವಾಗದಿರುವುದು ದುರದೃಷ್ಟಕರ ಎಂದು ನಗರಸಭೆ ಪೌರಾಯುಕ್ತ ಬಿ.ಎನ್. ಚಂದ್ರಶೇಖರ್ ಹೇಳಿದರು.
ತಾಲೂಕಿನ ಚಿಪ್ಳಿ-ಲಿಂಗದಹಳ್ಳಿಯ ನವೋದಯ ಯುವಕ ಸಂಘ, ಶಿವಪ್ಪನಾಯಕ ಗ್ರಾಮ ಅರಣ್ಯ ಸಮಿತಿ, ಸುಜಲಶ್ರೀ ವರದಾ ಸ್ವಸಹಾಯ ಸಂಘ, ಸುದರ್ಶನ ಯುವಕ ಸಂಘ ಹಾಗೂ ಚಿಪ್ಳಿ-ಲಿಂಗದಹಳ್ಳಿ ಗ್ರಾಮಸ್ಥರ ನೇತೃತ್ವದಲ್ಲಿ 8 ದಿನಗಳ ಕಾಲ ನಡೆದ ಸ್ವಚ್ಛತಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಪ್ರಸ್ತುತ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಬಳಸುವುದು ಅನಿವಾರ್ಯವಲ್ಲ. ಜನರು ಬಟ್ಟೆಚೀಲಗಳನ್ನು ಬಳಸಲು ಮುಜುಗರ ಪಡುತ್ತಾರೆ. ಕಸ ನಿರ್ವಹಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ ಪೂರ್ಣ ಪ್ರಮಾಣದ ಅನುಷ್ಠಾನವಾಗಬೇಕಾದರೆ ಆಡಳಿತದ ಜೊತೆ ಜನರ ಸಹಕಾರ ಅಗತ್ಯ. ಪ್ರತಿದಿನ ಸಾಗರ ನಗರದಲ್ಲಿ 25 ಟನ್ ಕಸ ಸಂಗ್ರಹವಾಗುತ್ತಿದೆ. ಅದನ್ನು ವಿಲೇವಾರಿ ಮಾಡುವುದು ಸವಾಲಿನ ಕೆಲಸವಾಗಿ ಪರಿಣಮಿಸಿದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ರಾಘವೇಂದ್ರ ಮಾತನಾಡಿ, ಸೂಟುಬೂಟ್ ಹಾಕಿಕೊಂಡು ಸ್ವಚ್ಛತಾ ಕಾರ್ಯವನ್ನು ಪ್ರಚಾರಕ್ಕೆ ಮಾಡುವವರ ನಡುವೆ ಚಿಪ್ಳಿ-ಲಿಂಗದಹಳ್ಳಿ ಗ್ರಾಮಸ್ಥರು ಕಳೆದ 8 ದಿನಗಳಿಂದ ಪ್ರಚಾರವಿಲ್ಲದೆ ಎಲೆಮರೆಯ ಕಾಯಿಯಂತೆ ಸ್ವಚ್ಛತಾ ಕೆಲಸ ಮಾಡಿದ್ದಾರೆ. ಪರಿಸರವನ್ನು ಸ್ವಚ್ಛಗೊಳಿಸಿದ್ದರಿಂದ ಮಲೆನಾಡಿನಂತಹ ಪ್ರದೇಶ ವಿಪರೀತ ತಾಪವನ್ನು ಎದುರಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮನುಷ್ಯ ನಿರ್ಮಿತ ಲೋಪದಿಂದ ಪರಿಸರ ತನ್ನ ಸಮತೋಲನ ಕಳೆದುಕೆ ೂಳ್ಳುತ್ತಿರುವುದು ದುರಂತದ ಸಂಗತಿ. ಇಂತಹ ಆಂದೋಲನಾ ಪ್ರತಿಹಳ್ಳಿಯಲ್ಲೂ ನಡೆಯಬೇಕು ಎಂದು ಅಭಿಪ್ರಾಯಿಸಿದರು. ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಗುರುಪ್ರಸಾದ್, ಪ್ರಮುಖರಾದ ದೊರೆಸ್ವಾಮಿ, ಶ್ರಾವ್ಯಸಾಗರ್, ಧ್ರುವ, ಜ್ಯೋತಿಕಾ, ಸೂರ್ಯ, ಭಾರತಿ, ಪೂಜಾ ಮತ್ತಿತರರು ಉಪಸ್ಥಿತರಿದ್ದರು.