×
Ad

ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ: ಬಿ.ಅರ್.ಪಾಂಡುರಂಗ

Update: 2016-05-15 21:52 IST

ಚಿಕ್ಕಮಗಳೂರು, ಮೇ 15: ಕರ್ನಾಟಕ ದಲಿತ ಸಂಘರ್ಷ ಸಮಿತಿ ಇತರೆ ದಲಿತ ಸಂಘಟನೆಗಳಿಗಿಂತ ಅತೀ ಹೆಚ್ಚು ಕಾರ್ಯಕರ್ತರನ್ನು ಹೊಂದಿದ್ದು, ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಬಿ.ಅರ್.ಪಾಂಡುರಂಗ ಸ್ವಾಮಿ ಹೇಳಿದ್ದಾರೆ.

 ಅವರು ಕರ್ನಾಟಕ ದಸಂಸ ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸದಸ್ಯತ್ವ ಸಮರ್ಪಣಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕ ದಸಂಸ ರಾಜ್ಯದಲ್ಲಿ ಅತೀ ಹೆಚ್ಚಿನ ಸದಸ್ಯರನ್ನು ಒಳಗೊಂಡ ಅತ್ಯಂತ ಕ್ರೀಯಾಶೀಲವಾಗಿರುವ ಸಂಘಟನೆಯಾಗಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ಮುಖ್ಯಮಂತ್ರಿಗಳಿಗೆ ನೀಡಿರುವ ವರದಿಯಲ್ಲಿ ಹೇಳಿದೆ. ನಾಡಿನ 30 ಜಿಲ್ಲೆಗಳಲ್ಲಿ ಪ್ರಾಮಾಣಿಕವಾಗಿ ದುಡಿಯುವ ಕಾರ್ಯಕರ್ತರನ್ನು ಸಂಘಟನೆ ಹೊಂದಿದೆ ಎಂದರು.

ಕರ್ನಾಟಕ ದಸಂಸ ಬಹುಜನ ಪಕ್ಷದ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಸಂಘಟನೆ ಮುಗಿದೇ ಹೋಯಿತೆಂಬ ಸ್ಥಿತಿ ಎದುರಾಗಿತ್ತು. ಆದರೆ ಅದರಿಂದ ಹೊರ ಬಂದ ಕೆಲವೇ ದಿನಗಳಲ್ಲಿ ಕಾರ್ಯಕರ್ತರ ಬಲದಿಂದಾಗಿ ಮತ್ತೆ ಸಂಘಟನೆ ಮುಂಚೂಣಿಗೆ ಬಂದಿತು ಎಂದು ತಿಳಿಸಿದರು.

 ಸಮಿತಿಯ ಜಿಲ್ಲಾ ಸಂಚಾಲಕ ತರೀಕೆರೆ ಎನ್. ವೆಂಕಟೇಶ್, ಜಿಲ್ಲೆಯ ಸದಸ್ಯತ್ವ ನೋಂದಣಿ ಪತ್ರಗಳನ್ನು ರಾಜ್ಯ ಸಮಿತಿಗೆ ಹಸ್ತಾಂತರಿಸಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 1,800ಕ್ಕೂ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ ಎಂದರು.

ಈ ಸಂದರ್ಭದಲ್ಲಿ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿ ಶಶಿಕಲಾ, ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತಕುಮಾರ್, ಜಿಲ್ಲಾ ಸಂಘಟನಾ ಸಂಚಾಲಕ ಮರ್ಲೆ ಅಣ್ಣಯ್ಯ, ತಾಲೂಕು ಸಂಚಾಲಕ ಚಂದ್ರಪ್ಪ, ಮೂಡಿಗೆರೆ ಸಂಚಾಲಕ ಕೃಷ್ಣಾ ಮಾಗಲು, ಕಡೂರು ಸಂಚಾಲಕರಾದ ಸಗನಪ್ಪ, ಕೃಷ್ಣಪ್ಪ, ತರೀಕೆರೆ ಸಂಚಾಲಕ ವೆಂಕಟಾಭೋವಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News