ದೇಶ ಸೇವೆಗೆ ಸಿಕ್ಕ ಸುವರ್ಣ ಅವಕಾಶ: ಆಸೀಮ್ ಅನ್ವರ್
- ಅಮ್ಜದ್‌ಖಾನ್ ಎಂ.
ಬೆಂಗಳೂರು, ಮೇ 15: 2015ನೆ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ 149ನೆ ರ್ಯಾಂಕ್ ಪಡೆದಿರುವ ಬೆಂಗಳೂರಿನ ಇಂದಿರಾನಗರದ ಆಸೀಮ್ ಅನ್ವರ್, ದೇಶ ಹಾಗೂ ಪ್ರಜೆಗಳ ಸೇವೆಗೆ ಸಿಕ್ಕಿದಂತಹ ಸುವರ್ಣ ಅವಕಾಶ ಇದಾಗಿದೆ ಎಂದು ಸಂಸತ ವ್ಯಕ್ತಪಡಿಸಿದ್ದಾರೆ.
ನನ್ನ ತಂದೆ ಎಚ್.ಅತೀಖ್ ಅನ್ವರ್ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಆರ್ಥಿಕ ವ್ಯವಹಾರಗಳ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ನನ್ನ ಪೋಷಕರಿಗೆ ನಾನು ಏಕೈಕ ಪುತ್ರನಾಗಿದ್ದು, ಬಾಲ್ಯದಿಂದಲೇ ನನ್ನ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ಅವರು ಬೆಂಬಲವಾಗಿ ನಿಂತಿದ್ದಾರೆ.
ಬೆಂಗಳೂರಿನ ಪೆಸಿಟ್ ಕಾಲೇಜಿನಲ್ಲಿ ಬಿಇ ಪದವಿ ಪಡೆದು ನಾನು, ಆನಂತರ ಉನ್ನತ ಶಿಕ್ಷಣಕ್ಕಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿದೆ. ಕೋಲ್ಕತ್ತಾದ ಐಐಎಂನಲ್ಲಿ ಎಂಬಿಎ ಪದವಿಯನ್ನುಗಳಿಸಿದೆ. ದೇಶದ ಆಡಳಿತ ವ್ಯವಸ್ಥೆಯ ಭಾಗವಾಗಬೇಕು ಎಂಬ ಮಹದಾಸೆ ನನ್ನನ್ನು ನಿರಂತರವಾಗಿ ಕಾಡುತ್ತಿತ್ತು. ನನ್ನ ಕನಸನ್ನು ಸಾಕಾರಗೊಳಿಸಲು ಪೋಷಕರು ಹಾಗೂ ನನ್ನ ಪತ್ನಿ ಸಾಕಷ್ಟು ಬೆಂಬಲ, ಪ್ರೋತ್ಸಾಹ ನೀಡಿದ್ದಾರೆ. ಐಎಎಸ್, ಐಪಿಎಸ್, ಐಎಫ್‌ಎಸ್ ಸೇವೆಗೆ ಆಯ್ಕೆ ಯಾಗಬೇಕು ಎಂಬುದು ತನ್ನ ಬಹುದಿನಗಳ ಕನಸಾಗಿತ್ತು. ಈ ಹಿನ್ನೆಲೆಯಲ್ಲಿ 2013ರಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಬರೆದು 486ನೆ ರ್ಯಾಂಕ್ ಪಡೆದು ಭಾರತೀಯ ಕಂದಾಯ ಸೇವೆ(ಐಆರ್‌ಎಸ್)ಗೆ ಆಯ್ಕೆಯಾದೆ. ಆನಂತರ, ನನ್ನನ್ನು ಬೆಂಗಳೂರಿನ ಐಆರ್‌ಎಸ್ ವಿಭಾಗದ ಸಹಾಯಕ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಪ್ರಸ್ತುತ ಅಲ್ಲಿಯೆ ಸೇವೆ ಸಲ್ಲಿಸುತ್ತಿದ್ದೇನೆ. 2015ರಲ್ಲಿ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆಯುವ ನಿರ್ಧಾರವನ್ನು ಕೈಗೊಂಡು ಕಠಿಣ ಪರಿಶ್ರಮದಿಂದ ಮುಂದುವರಿದೆ. ಅದರ ಪ್ರತಿಫಲವಾಗಿ ಈ ಬಾರಿ 149ನೆ ರ್ಯಾಂಕ್ ಪಡೆದೆ.
ಐಎಫ್‌ಎಸ್ ಅಥವಾ ಐಪಿಎಸ್ ಸಿಗಬಹುದು ಎಂಬ ನಿರೀಕ್ಷೆಯಿದೆ. ಯಾವುದೇ ಹುದ್ದೆ ಸಿಕ್ಕರೂ ಅದನ್ನು ಸಂತೋಷವಾಗಿ ಸ್ವೀಕರಿಸುತ್ತೇನೆ. ದೇಶ ಹಾಗೂ ಪ್ರಜೆಗಳ ಸೇವೆಗೆ ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಜನರಿಗೆ ಸೇವೆ ಒದಗಿಸಲು ಸಾಕಷ್ಟು ಅವಕಾಶಗಳು ನಮಗೆ ಸಿಗುತ್ತವೆ.