ರೈಲ್ವೆ ಕಾಮಗಾರಿಗೆ ಹಣ ಬಿಡುಗಡೆ: ಸಿದ್ದರಾಮಯ್ಯ
ಬೆಂಗಳೂರು, ಮೇ 15: ರಾಜ್ಯ ಸರಕಾರ ರಾಜ್ಯದ ರೈಲ್ವೆ ಕಾಮಗಾರಿಗಳು ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ಈಗಾಗಲೇ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ರವಿವಾರ ನಗರದ ನೈರುತ್ಯ ರೈಲ್ವೆ ವಲಯ ರೈಲ್ವೆ ಇನ್‌ಸ್ಟಿಟ್ಯೂಟ್ ಮೈದಾನದಲ್ಲಿ ಆಯೋಜಿಸಿದ್ದ ರೈಲ್ವೆ ಇಲಾಖೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಲೋಕಾರ್ಪಣೆ ಮತ್ತು ನಿಲ್ದಾಣದ ಮರು ನಾಮಕರಣವನ್ನು ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ರೈಲ್ವೆ ಯೋಜನೆಗಳು ಜಾರಿಗೊಳ್ಳಬೇಕಾದರೆ ಅರ್ಧ ಹಣವನ್ನು ರಾಜ್ಯ ಸರಕಾರವೂ ನೀಡಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಾಮಗಾರಿಗಳು ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ತನ್ನ ಪಾಲಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ರೈಲ್ವೆ ಇಲಾಖೆಯು ರಾಜ್ಯದಲ್ಲಿ ಕೈಗೆತ್ತಿಕೊಳ್ಳುವ ಮೇಲ್ಸೇತುವೆ, ಕೆಳಸೇತುವೆ ಕಾಮಗಾರಿಗಳ ಯೋಜನೆ ಜಾರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು. ಹಾಗೂ ಬಜೆಟ್ ಮಂಡನೆ ವೇಳೆ ರಾಜ್ಯಕ್ಕೆ ಸಬರಮನ್ ರೈಲನ್ನು ನೀಡಲಾಗುವುದು ಎಂದು ಘೋಷಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಬಜೆಟ್ ಮಂಡನೆ ವೇಳೆ 100 ಕೋಟಿ ರೂ.ವನ್ನು ಈಗಾಗಲೇ ಮೀಸಲಿಟ್ಟಿದೆ ಎಂದು ಹೇಳಿದರು. ರೈಲ್ವೆ ಟಿಕೆಟ್‌ಗಳಲ್ಲಿ ಹಾಗೂ ರೈಲ್ವೆ ಬೋಗಿಗಳ ಮೇಲೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಬರೆಯಬೇಕು. ಆದರೆ, ಅಧಿಕಾರಿಗಳು ರೈಲ್ವೆ ಟಿಕೆಟ್ ಹಾಗೂ ಬೋಗಿಗಳ ಮೇಲೆ ಬರೀ ಕೆಎಸ್‌ಆರ್ ಎಂದು ಬರೆದಿದ್ದು, ಈ ಹೆಸರನ್ನು ಅಧಿಕಾರಿಗಳು ತೆಗೆದು ಹಾಕಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ನಮೂದಿಸಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರಕಾರ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಮರುನಾಮಕರಣಗೊಳಿಸಿ ಉತ್ತಮ ಕೆಲಸ ಮಾಡಿದೆ. ಅಲ್ಲದೆ, ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನದಲ್ಲಿ ಸೈನ್ಯಾಧಿಕಾರಿಯಾಗಿದ್ದುಕೊಂಡು ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದವರು. ಹೀಗಾಗಿ, ಇವರ ಸ್ಮರಣಾರ್ಥ ಈ ರೈಲ್ವೆ ನಿಲ್ದಾಣಕ್ಕೆ ಅವರ ಹೆಸರನ್ನು ಇಡಲಾಗಿದೆ ಎಂದು ಹೇಳಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ರಾಜ್ಯದ ಇಪತ್ತು ವರ್ಷದ ಹಳೆಯ ರೈಲ್ವೆ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಈಗ ರೈಲ್ವೆ ಸಚಿವರು ಹೊಸ ಯೋಜನೆಗಳನ್ನು ಜಾರಿಗೊಳಿಸುವುದಕ್ಕಿಂತಲೂ ಮೊದಲು ಹಳೆಯ ಯೋಜನೆಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು. ತಾನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೋದಾಗ ಬೆಂಗಳೂರು ಮತ್ತು ಹಾಸನ ರೈಲ್ವೆ ದ್ವಿಪಥೀಕರಣ ಯೋಜನೆ ಜಾರಿಗೆ 165 ಕೋಟಿ ರೂ.ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಅಧಿಕಾರಿಗಳೂ ಈ ಯೋಜನೆ ಪೂರ್ಣಗೊಳ್ಳಲು 5 ರಿಂದ 6 ಎಕರೆ ಜಮೀನಿನ ಆವಶ್ಯಕತೆ ಇದೆ ಎಂದು ಅಧಿಕಾರಿಗಳು ತಮ್ಮ ಗಮನಕ್ಕೆ ತಂದಿದ್ದು, ರಾಜ್ಯ ಸರಕಾರ ಈ ಜಮೀನನ್ನು ಒದಗಿಸಿ ಕಾಮಗಾರಿ ಪೂರ್ಣತೆಗೆ ಸಹಕರಿಸಬೇಕೆಂದು ಹೇಳಿದರು.
ಅನ್ಯ ರಾಜ್ಯಗಳಿಗೆ ಹೊಲಿಸಿದರೆ ಕರ್ನಾಟಕಕ್ಕೆ ಹೆಚ್ಚಿನ ರೈಲ್ವೆ ಯೋಜನೆಗಳು ಜಾರಿಗೊಂಡಿಲ್ಲ. ಈಗಲಾದರೂ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಹಾಗೂ ಜೈನ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಶ್ರವಣಬೆಳಗೊಳದಿಂದ ಶಿವಮೊಗ್ಗಕ್ಕೆ ರೈಲೊಂದನ್ನು ಓಡಿಸಬೇಕೆಂದು ಹೇಳಿದರು.