×
Ad

ಆನ್‌ಲೈನ್ ಪರೀಕ್ಷಾ ಪದ್ಧತಿಯಿಂದ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ: ಡಾ.ಕೆ.ಬಾಲವೀರ ರೆಡ್ಡಿ

Update: 2016-05-15 23:44 IST

ಬೆಂಗಳೂರು, ಮೇ 15: ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿ ಆನ್‌ಲೈನ್ ಪರೀಕ್ಷಾ ಪದ್ಧತಿ ಅಳವಡಿಸಿದರೆ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಸಾಧ್ಯ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ಬಾಲವೀರ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಬೆಂಗಳೂರು ವಿವಿಯಲ್ಲಿ ವಿಶ್ರಾಂತ ಕುಲಪತಿಗಳ ವೇದಿಕೆ ಏರ್ಪಡಿಸಿದ್ದ ‘ಇ-ಕಲಿಕಾ ವೇದಿಕೆ-ಆನ್‌ಲೈನ್ ಪರೀಕ್ಷೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಶಿಕ್ಷಣ ವ್ಯವಸ್ಥೆಯನ್ನೆ ಆತಂಕಕ್ಕೆ ಸಿಲುಕಿಸಿದೆ. ಆ ಹಿನ್ನೆಲೆಯಲ್ಲಿ ಆನ್‌ಲೈನ್ ಪರೀಕ್ಷಾ ವ್ಯವಸ್ಥೆ ಅತ್ಯಂತ ಸುಲಭ ಮಾರ್ಗ ಎಂದು ಸಲಹೆ ಮಾಡಿದರು.
ಪರೀಕ್ಷಾ ನಿರ್ವಹಣಾ ತಂತ್ರಾಂಶದ ಮೂಲಕ ಯಾದೃಚ್ಛಿಕ ಪ್ರಶ್ನೆಗಳನ್ನು ಪ್ರಶ್ನೆ ಭಂಡಾರದಿಂದ ಆಯ್ಕೆ ಮಾಡಿ ಪ್ರತಿ ವಿದ್ಯಾರ್ಥಿಗೆ ಒಂದೇ ಮಟ್ಟದ ವಿಶೇಷ ಪ್ರಶ್ನೆ ಪತ್ರಿಕೆ ಬರುವಂತೆ ಮಾಡಬಹುದು. ಈ ರೀತಿ ತಂತ್ರಜ್ಞಾನದ ಬಳಕೆಯಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಸಂಪೂರ್ಣ ತಡೆಗಟ್ಟಲು ಸಾಧ್ಯ ಎಂದು ಭರವಸೆ ವ್ಯಕ್ತಪಡಿಸಿದರು.
ಆನ್‌ಲೈನ್ ಪರೀಕ್ಷೆಯನ್ನು ಪದವಿಪೂರ್ವ ಶಿಕ್ಷಣ ಮಂಡಳಿ ಅಥವಾ ಅಧಿಕೃತ ಸಂಸ್ಥೆಯಿಂದ ನಡೆಸಬಹುದು. ಅಸ್ತಿತ್ವದಲ್ಲಿರುವ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳು ಮೂಲ ಸೌಕರ್ಯ ಬಳಕೆ ಮಾಡಿಕೊಳ್ಳಬಹುದು. ಪ್ರಶ್ನೆ ಪತ್ರಿಕೆಯನ್ನು ತಯಾರಿಸಿ ಗೌಪ್ಯಸಂಖ್ಯೆಯುಳ್ಳ ಒಎಂಆರ್ ಹಾಳೆಗಳಲ್ಲಿ ಮುದ್ರಿಸಬಹುದು ಎಂದರು.
ಆಧುನಿಕ ತಾಂತ್ರಿಕತೆಯ ಮಾದರಿಯಿಂದ ಪ್ರಶ್ನೆ ಪತ್ರಿಕೆ ನೀಡುವುದರಿಂದ ಹಲವು ಬ್ಯಾಚ್‌ಗಳಲ್ಲಿ ಪರೀಕ್ಷೆ ನಡೆಸಬಹುದು. ಯಾದೃಚ್ಛಿಕ ಪ್ರಶ್ನೆಗಳನ್ನು ಪ್ರಶ್ನೆ ಭಂಡಾರದಿಂದ ಆಯ್ಕೆ ಮಾಡಿ ಪ್ರತಿ ವಿದ್ಯಾರ್ಥಿಗೆ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಕೊಡುವುದರಿಂದ ಪರೀಕ್ಷೆಯಲ್ಲಿ ನಕಲು ಅಥವಾ ಸಾಮೂಹಿಕ ನಕಲು ಮಾಡುವ ಸಾಧ್ಯತೆ ಇರುವುದಿಲ್ಲ ಎಂದರು.
ಶಿಕ್ಷಕರ ಕೊರತೆ ಮತ್ತು ನ್ಯಾಯೋಚಿತ ವೌಲ್ಯಮಾಪನ ಸವಾಲುಗಳನ್ನು ಆನ್‌ಲೈನ್ ಪರೀಕ್ಷೆ ಸಂಪೂರ್ಣವಾಗಿ ನೀಗಿಸುತ್ತದೆ. ಆನ್‌ಲೈನ್ ಪರೀಕ್ಷೆಯಿಂದ ಸೋರಿಕೆಗೆ ತಡೆ ಬೀಳುವುದಲ್ಲದೆ, ಆಡಳಿತ ನಿರ್ವಹಣೆಯೂ ಸುಲಭವಾಗಲಿದೆ ಎಂದು ಅವರು ಇದೇ ವೇಳೆ ನುಡಿದರು.
 ಆನ್‌ಲೈನ್ ಪರೀಕ್ಷೆ: ವಿಟಿಯುನಲ್ಲಿ ಆನ್‌ಲೈನ್ ಪರೀಕ್ಷೆ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಅಳವಡಿಸಿಕೊಂಡಿದೆ. ರಾಜ್ಯಾದ್ಯಂತ ಇರುವ ವಿವಿ ಎಂಬಿಎ ಮತ್ತು ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ಆನ್‌ಲೈನ್ ಪರೀಕ್ಷೆ ವ್ಯವಸ್ಥೆಯನ್ನು 2004-05ರಲ್ಲಿಯೇ ಅಳವಡಿಸಿಕೊಂಡಿದ್ದು, ಯಶಸ್ವಿಯೂ ಆಗಿದ್ದೇವೆ ಎಂದರು.

ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಪದವಿ ಪೂರ್ವ ಶಿಕ್ಷಣ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಆನ್‌ಲೈನ್ ಪರೀಕ್ಷಾ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ಹೊಸ ಬದಲಾವಣೆ ತರಲು ಇದು ಸುಸಮಯ ಎಂದ ಅವರು ಇದೇ ವೇಳೆ ಸರಕಾರಕ್ಕೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿಗಳ ವೇದಿಕೆ ಅಧ್ಯಕ್ಷ ಡಾ.ಎಂ.ಮಹಾದೇವಪ್ಪ, ಉಪಾಧ್ಯಕ್ಷ ಡಾ.ಎನ್.ಪ್ರಭುದೇವ್, ಕಾರ್ಯದರ್ಶಿ ಡಾ. ಆರ್.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News