×
Ad

ಕಳವು ಪ್ರಕರಣ: ಆರೋಪಿಯ ಬಂಧನ

Update: 2016-05-16 21:59 IST

ದಾವಣಗೆರೆ, ಮೇ 16: ದಿನನಿತ್ಯದ ಖರ್ಚಿಗಾಗಿ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಸುಮಾರು 5 ಲಕ್ಷ ರೂ.ವೌಲ್ಯದ ಚಿನ್ನಾಭರಣ ಹಾಗೂ 650 ಗ್ರಾಂ. ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮಂಡಕ್ಕಿಭಟ್ಟಿ ಕ್ವಾಟ್ರಸ್ ನಿವಾಸಿ ದಾದು (24) ಕಳ್ಳತನ ಪ್ರಕರಣದಲ್ಲಿ ಬಂಧಿತ ಆರೋಪಿ. ಈತ ಈ ಹಿಂದೆ ಹಲವಾರು ಕಳವು ಪ್ರಕರಣಗಳಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರ ಬಂದಿದ್ದ ಎಂದ ಅವರು, ಇತ್ತೀಚೆಗೆ ನಗರದ ಗಡಿಯಾರ ಕಂಬದ ಹತ್ತಿರ ವಿಜಯಲಕ್ಷ್ಮೀ ರಸ್ತೆಯಲ್ಲಿ ಪೊಲೀಸ್ ಗಸ್ತುವಾಹನ ಗಮನಿಸಿ ಪರಾರಿಯಾಗಲು ಯತ್ನಿಸಿದ್ದ ವೇಳೆ ದಾದುನನ್ನು ಬಂಧಿಸಲಾಗಿದೆ ಎಂದರು.

ಈತನನ್ನು ವಿಚಾರಣೆಗೊಳಪಡಿಸಿದಾಗ ತನ್ನ ದಿನನಿತ್ಯದ ಖರ್ಚಿಗಾಗಿ ಹಣದ ಅವಶ್ಯಕತೆ ಉಂಟಾಗಿದ್ದರಿಂದ ಸಮೀಪದ ಆವರಣಗೆರೆ ಶೇಖರಪ್ಪ ಬಡಾವಣೆಯ ಒಂದು ಮನೆಯಲ್ಲಿ ಹಾಗೂ ಮಾರ್ಚ್ ತಿಂಗಳಲ್ಲಿ ಹರಪನಹಳ್ಳಿಯ ತೆಲಿಗೇರ ಓಣಿಯ ಮನೆಯೊಂದರಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನ ವಿರುದ್ಧ ಹಲವೆಡೆ ಕಳ್ಳತನದ ದೂರು ದಾಖಲಾಗಿದೆ ಎಂದು ತಿಳಿಸಿದರು.

ಜೂಜಾಟ: ನೋಟಿಸ್ ಜಾರಿ:

ನಗರದ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಮನೂರು ಹತ್ತಿರ ವಜ್ರ ಕ್ರಿಯೇಷನ್ ಕ್ಲಬ್‌ನಲ್ಲಿ ಹಣ ಕಟ್ಟಿ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ಹಣ ಹಾಗೂ ಟೋಕನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ 3,72,950 ರೂ. ನಗದು ಹಣ, 2,36,550 ರೂ. ಮುಖಬೆಲೆಯ ಟೋಕನ್‌ಗಳು ಹಾಗೂ ಇಸ್ಪೀಟ್ ಕಾರ್ಡ್‌ಗಳು, ಕರೆನ್ಸಿ ಕೌಂಟಿಂಗ್ ಮೆಶಿನ್ ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಕ್ಲಬ್‌ನಲ್ಲಿದ್ದ 56 ಜನರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಎಸ್ಪಿ ಭೀಮಾಶಂಕರ್ ಗುಳೇದ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಅಶೋಕ್ ಕುಮಾರ್, ಸಿಪಿಐ ಜಿ.ಬಿ. ಉಮೇಶ್, ಸಿಬ್ಬಂದಿ ರಾಮರೆಡ್ಡಿ, ಚಂದ್ರಶೇಖರ್, ಬಸವರಾಜ್, ಆರಿಫ್, ಗಿರೀಶ್ ಗೌಡ, ಬಶೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News