ಸರಕಾರಿ ಮೆಗ್ಗಾನ್ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ ಧರಣಿ
ಶಿವಮೊಗ್ಗ, ಮೇ 16: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಸೋಮವಾರ ಇಲ್ಲಿನ ಸರಕಾರಿ ಮೆಗ್ಗಾನ್ ಆಸ್ಪತ್ರೆಯ ಹೊರಗುತ್ತಿಗೆ (ಮ್ಯಾನ್ ಪವರ್ ಏಜೆನ್ಸಿ ಮೂಲಕ ನಿಯೋಜಿತ) ಸಿಬ್ಬಂದಿ ಸೋಮವಾರ ಬೆಳಗ್ಗೆಯಿಂದ ಸರಕಾರಿ ಮೆಡಿಕಲ್ ಕಾಲೇಜು ಆವರಣದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಸ್ಟಾಫ್ ನರ್ಸ್, ಸ್ವಚ್ಛತಾ ವಿಭಾಗದವರು, ಅಟೆಂಡರ್ಸ್, ವಾಹನ ಚಾಲಕರು ಸೇರಿದಂತೆ ಸುಮಾರು 200 ಕ್ಕೂ ಅಧಿಕ ಹೊರಗುತ್ತಿಗೆ ಸಿಬ್ಬಂದಿ ಧರಣಿಯಲ್ಲಿ ಭಾಗವಹಿಸಿದ್ದರು. ವಿವಿಧ ದಲಿತ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ, ನಾಯಕರು ಧರಣಿಯಲ್ಲಿ ಭಾಗವಹಿಸಿದ್ದರು. ಸಿಬ್ಬಂದಿ ಧರಣಿಯಿಂದ ಆಸ್ಪತ್ರೆಯ ದೈನಂದಿನ ಕೆಲಸ ಕಾರ್ಯಗಳಲ್ಲಿ ತೀವ್ರ ವ್ಯತ್ಯಯ ಉಂಟಾಯಿತು. ತಮ್ಮದಲ್ಲದ ತಪ್ಪಿಗೆ ನೂರಾರು ಬಡ ರೋಗಿಗಳು ತೊಂದರೆ ಅನುಭವಿಸುವಂತಾಯಿತು. ಬೇಡಿಕೆಯೇನು?: ಕಳೆದ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದೇವೆ. ಆದರೆ ಕೆಲಸಕ್ಕೆ ತಕ್ಕಂತೆ ವೇತನ ನೀಡುತ್ತಿಲ್ಲ. ಸೌಲಭ್ಯ ಕಲ್ಪಿಸುತ್ತಿಲ್ಲ. ಇದರಿಂದ ಜೀವನ ನಡೆಸುವುದು ದುಸ್ತರವಾಗಿ ಪರಿಣಮಿಸಿದೆ ಎಂದು ಧರಣಿನಿರತರು ಆರೋಪಿಸಿದ್ದಾರೆ. ಇತ್ತೀಚೆಗೆ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್‌ಗಳ ವೇತನ ಹೆಚ್ಚಳ ಮಾಡಲಾಗಿದ್ದು, ಮಾಸಿಕ 13 ಸಾವಿರ ರೂ. ನೀಡಲಾಗುತ್ತಿದೆ. ಆದರೆ 8 ಗಂಟೆಗಿಂತಲೂ ಹೆಚ್ಚು ಅವಧಿ ಕೆಲಸ ಮಾಡುವ ಸ್ಟಾಫ್‌ನರ್ಸ್, ಸ್ವಚ್ಛತಾ ಕೆಲಸಗಾರರು,ಅಟೆಂಡರ್, ವಾಹನ ಚಾಲಕರ ವೇತನ ಏರಿಕೆ ಮಾಡಿಲ್ಲ. ಇದು ಸಂಪೂರ್ಣ ತಾರತಮ್ಯದಿಂದ ಕೂಡಿದೆ ಎಂದು ಧರಣಿನಿರತರು ಆಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ವೇತನ ಹೆಚ್ಚಳ ಮಾಡಬೇಕು. ಹುದ್ದೆ ಖಾಯಂಗೊಳಿಸಬೇಕು. ಕಾರ್ಮಿಕ ಇಲಾಖೆಯ ನಿಯಮಾನುಸಾರ ಸೌಲಭ್ಯ ಕಲ್ಪಿಸಬೇಕು ಎಂದು ಧರಣಿನಿರತರು ಆಗ್ರಹಿಸಿದ್ದಾರೆ. ನೌಕರರ ಸಂಘದ ಪ್ರಮುಖರಾದ ಎಲ್.ಎಚ್.ರಾಮಪ್ಪ, ಆಪ್ರೋಝ್, ಪದ್ಮರಾಜ್, ನರಸಿಂಹರಾಜ್ ಸೇರಿದಂತೆ ಮೊದಲಾದವರಿದ್ದರು.
ಅನುಮತಿ ನಿರಾಕರಣೆ: ಮತ್ತೊಂದೆಡೆ ಹೊರಗುತ್ತಿಗೆ ಸಿಬ್ಬಂದಿ ಮುಷ್ಕರಕ್ಕೆ ಮೆಡಿಕಲ್ ಕಾಲೇಜು ಡೀನ್ ಬಿ.ವಿ.ಸುಶೀಲ್‌ಕುಮಾರ್ ಹಾಗೂ ಆಡಳಿತಾಧಿಕಾರಿ ಗಣಪತಿ ಕಟ್ಟಿನಕೆರೆಯವರು ಅನುಮತಿ ನಿರಾಕರಿಸಿದ್ದರು. ಏಕಾಏಕಿ ನೂರಾರು ಸಿಬ್ಬಂದಿ ಧರಣಿ ನಡೆಸಿದರೆ ಆಸ್ಪತ್ರೆಯ ಕಾರ್ಯನಿರ್ವಹಣೆ ಹಾಗೂ ರೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮನವಿ ಸಲ್ಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು.
ರೋಗಿಗಳ ಪರದಾಟ
: ವಾರದ ಮೊದಲ ದಿನವಾದ ಸೋಮ ವಾರದಂದು ಸರ್ವೇಸಾಮಾನ್ಯವಾಗಿ ರೋಗಿಗಳ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಹೊರಗುತ್ತಿಗೆಯ ನೂರಾರು ಸಿಬ್ಬಂದಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದು, ರೋಗಿಗಳ ಮೇಲೆ ಪ್ರಭಾವ ಬೀರುವಂತಾಯಿತು. ಚಿಕಿತ್ಸೆ ಪಡೆದುಕೊಳ್ಳಲು ಗಂಟೆಗಟ್ಟಲೆ ಕಾದು ಕುಳಿತುಕೊಳ್ಳುವಂತಾಗಿತ್ತು.