ಎಸೆಸೆಲ್ಸಿ ಫಲಿತಾಂಶ
ಶಿರಸಿಯ ಮಹಿಮಾ ಭಟ್ ರಾಜ್ಯಕ್ಕೆ ದ್ವಿತೀಯ
ಕಾರವಾರ, ಮೇ 16: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಹುಲೇ ಕಲ್ ಶ್ರೀದೇವಿ ಪ್ರೌಢ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಮಹಿಮಾ ಭಟ್ 624 ಅಂಕ ಪಡೆದು ರಾಜ್ಯಕ್ಕೆ 2ನೆ ಸ್ಥಾನ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯ ಕುಮಟಾ ತಾಲೂಕಿನ ಎಂ. ಪ್ರಜ್ಞಾ 622 ಅಂಕ ಗಳಿಸಿ ರಾಜ್ಯಕ್ಕೆ 4ನೆ ಸ್ಥಾನ ಪಡೆದುಕೊಂಡಿದ್ದಾಳೆ.
ಮಹಿಮಾ ಭಟ್ ಪ್ರಥಮ ಭಾಷೆ ಸಂಸ್ಕೃತದಲ್ಲಿ 125, ಇಂಗ್ಲಿಷ್ 99, ಕನ್ನಡ 100, ಗಣಿತ 100, ವಿಜ್ಞಾನ 100, ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಪಡೆದುಕೊಂಡಿದ್ದಾಳೆ.
ಕುಮಟಾದ ಎಂ. ಪ್ರಜ್ಞಾ ಒಟ್ಟ್ಟು 622 ಅಂಕ ಪಡೆದು, ಪ್ರಥಮ ಭಾಷೆ ಸಂಸ್ಕೃತದಲ್ಲಿ 125, ಇಂಗ್ಲಿಷ್ 98, ಕನ್ನಡ 100, ಗಣಿತ 99, ವಿಜ್ಞಾನ 100, ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಪಡೆದುಕೊಂಡಿದ್ದಾಳೆ.
ಎಸೆಸೆಲ್ಸಿ ಫಲಿತಾಂಶ ದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ.87.83 ಫಲಿತಾಂಶವಾಗಿದ್ದು, ರಾಜ್ಯಕ್ಕೆ 4ನೇ ಸ್ಥಾನ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 85.56 ಫಲಿತಾಂಶವಾಗಿದ್ದು, ರಾಜ್ಯಕ್ಕೆ 9ನೇ ಸ್ಥಾನ ಪಡೆದುಕೊಂಡಿದೆ.
ವೀರಾಜಪೇಟೆಯ ನಿಹಾರಿಕಾ 621ಅಂಕ
ಕೊಡಗಿಗೆ 18ನೆ ಸಾ್ಥನ
ಮಡಿಕೇರಿ, ಮೇ 16: ಹತ್ತನೆ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ ರಾಜ್ಯದಲ್ಲಿ 18ನೆ ಸ್ಥಾನ ಪಡೆದುಕೊಂಡಿದೆ. ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಲ್ಲಿ ಶೇ. 78.93 ಮಂದಿ ಉತ್ತೀರ್ಣರಾಗಿದ್ದಾರೆ.
ವೀರಾಜಪೇಟೆಯ ಸೈಂಟ್ ಆನ್ಸ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ನಿಹಾರಿಕಾ ಒಟ್ಟು 621 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮಳಾಗಿದ್ದಾಳೆ. ಮಾ. 30ರಿಂದ ಎ.13ರವರೆಗೆ ನಡೆದ ಎಸೆಸೆಲ್ಸಿ ಪರೀಕ್ಷೆಗೆ ಜಿಲ್ಲೆಯ ಒಟ್ಟು 8,267 ವಿದ್ಯಾ ರ್ಥಿಗಳು ಹಾಜರಾಗಿದ್ದರು. 2015-16ನೆ ಸಾಲಿನಲ್ಲಿ ವ್ಯಾಸಂಗ ಮಾಡಿದ 7,765 ಮಂದಿಯಲ್ಲಿ 3,802 ವಿದ್ಯಾರ್ಥಿಗಳು ಹಾಗೂ 3,963 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಜೊತೆಗೆ ಖಾಸಗಿಯಾಗಿ 109 ವಿದ್ಯಾರ್ಥಿಗಳು, ಅನುತ್ತೀರ್ಣರಾದವರು ಒಟ್ಟು 393 ಮಂದಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 8,267 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮೇ 17ರಂದು ಎಲ್ಲಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಜಿ.ಆರ್.ಬಸವರಾಜು ತಿಳಿಸಿದ್ದಾರೆ.
ಆಶಾಕಿರಣ ಅಂಧ ಮಕ್ಕಳ ಶಾಲೆ ಶೇ.100 ಸಾಧನೆ
ಚಿಕ್ಕಮಗಳೂರು, ಮೇ 16: ಕರ್ನಾಟಕ ಅಂಧರ ಒಕ್ಕೂಟದ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ಆಶಾಕಿರಣ ಅಂಧ ಮಕ್ಕಳ ಪಾಠ ಶಾಲೆಯಲ್ಲಿ 2015-16ನೆ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ 11 ಅಂಧ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.100 ಸಾಧನೆ ಮಾಡಿದೆ ಎಂದು ಕರ್ನಾಟಕ ಅಂಧರ ಒಕ್ಕೂಟ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಆಶಾಕಿರಣ ಚಾರಿಟೇಬಲ್ ಟ್ರಸ್ಟ್ ಡಾ. ಜೆ.ಪಿ. ಕೃಷ್ಣೇಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎಸೆಸೆಲ್ಸಿ ಸಾರ್ವತ್ರಿಕ ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಎಲ್ಲಾ 11 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ರಾಗಿದ್ದಾರೆ. ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿರುವ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಶಿಕ್ಷಕೇತರ ವರ್ಗದವರಿಗೆ ಆಶಾಕಿರಣ ಚಾರಿಟೇಬಲ್ ಟ್ರಸ್ಟ್, ಕರ್ನಾಟಕ ಅಂಧರ ಒಕ್ಕೂಟದ ಆಡಳಿತ ಮಂಡಳಿ ಪರವಾಗಿ ಮತ್ತು ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ನಮ್ಮ ಅಂಧಮ್ಕಕಳಿಗೆ ಎಂಇಎಸ್ ವಿದ್ಯಾಸಂಸ್ಥೆ ಮತ್ತು ಸಂತಜೋಸೆಫರ ಶಾಲೆಯ 9ನೆ ತರಗತಿಯ ವಿದ್ಯಾರ್ಥಿಗಳು ಸಹಾಯಕ ಬರಹಗಾರರಾಗಿದ್ದರು.
ಮಕ್ಕಳ ಫಲಿತಾಂಶದ ವಿವರ: ಬೇಬಿ-528, ಗಿರೀಶ್ ಬಿ.ಎಲ್.-471, ಕಿರಣ್ ಕೆ.-531, ಮಲ್ಲೇಶ್-559, ಮಲ್ಲೇ ಶಪ್ಪ ಎಸ್.ಎನ್. -579, ನವೀನಕುಮಾರ್ ಬಿ.ಆರ್.-472, ಪ್ರಹ್ಲಾದ್ ಆರ್.ಸಿ.- 538, ರವಿ ಜೆ. -568, ಸುದೀಪ್ ಕೆ.ಎಂ. - 539, ವರದರಾಜು ಜಿ.ಪಿ. -543, ವರದರಾಜು ಪಿ. -543 ಅಂಕಗಳನ್ನು ಪಡೆದು ಕೊಂಡಿದ್ದಾರೆ. ಪಾರ್ವತಿ, ವರ್ಷಿಣಿ 619 ಅಂಕ
ದಾವಣಗೆರೆ ಜಿಲ್ಲೆಗೆ ಪ್ರಥಮ
ದಾವಣಗೆರೆ, ಮೇ 16: ಸಿದ್ದಗಂಗಾ ಪ್ರೌಢಶಾಲೆಯ ಬಿ. ಪಾರ್ವತಿ ಎಂಬ ವಿದ್ಯಾರ್ಥಿನಿ 619 ಅಂಕ ಹಾಗೂ ಸೆಂಟ್‌ಫಾಲ್ಸ್ ಪ್ರೌಢಶಾಲೆ ವಿದ್ಯಾರ್ಥಿನಿ ವರ್ಷಿಣಿ 619 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ತರಳಬಾಳು ಪ್ರೌಢಶಾಲೆಯ ವಿದ್ಯಾರ್ಥಿನಿ ಐಶ್ವರ್ಯಾ 618 ಹಾಗೂ ಸೋಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಖಿಲ್ 616 ಅಂಕಗಳನ್ನು ಪಡೆಯುವ ಮೂಲಕ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾಗಿದ್ದಾರೆ.
ಸಿದ್ದಗಂಗಾ ಶಾಲೆಯ ವಿದ್ಯಾರ್ಥಿನಿ ಬಿ. ಪಾರ್ವತಿ ನಗರದ ದೇವರಾಜ ಅರಸ್ ಬಡಾವಣೆಯ ನಿವಾಸಿಯಾದ ಬಂಡ್ರಿ ಬಸವರಾಜಪ್ಪ ಅವರ ಪುತ್ರಿಯಾಗಿದ್ದು, ಈಗ ಬಂದಿರುವ ಅಂಕಗಳಿಗಿಂತ ಇನ್ನೂ ಐದು ಅಂಕಗಳು ಬರಬೇಕಿದ್ದರಿಂದ ಮರುವೌಲ್ಯಮಾಪನಕ್ಕೆ ಅರ್ಜಿ ಹಾಕುವುದಾಗಿ ವಿದ್ಯಾರ್ಥಿನಿ ಪಾರ್ವತಿ ತಿಳಿಸಿದ್ದಾರೆ.
*ಕಳೆದ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ 2014-15ನೆ ಸಾಲಿನಲ್ಲಿ ಶೇ. 87.15ರಷ್ಟು ಫಲಿತಾಂಶದೊಂದಿಗೆ 16ನೆ ಸ್ಥಾನ ಪಡೆದಿದ್ದ ದಾವಣಗೆರೆ ಜಿಲ್ಲೆ, ಈ ಸಾಲಿನ 2015-16ನೆ ವರ್ಷದಲ್ಲಿ ಕೇವಲ ಶೇ. 78.43ರಷ್ಟು ಫಲಿತಾಂಶ ಮೂಲಕ ಕಳೆದ ವರ್ಷಕ್ಕಿಂತ ಶೇ. 3ರಷ್ಟು ಕಡಿಮೆ ಫಲಿತಾಂಶ ಪಡೆದು ರಾಜ್ಯದಲ್ಲಿ 19ನೆ ಸ್ಥಾನಕ್ಕೆ ಇಳಿದಿದೆ. ಈ ಬಾರಿ ಜಿಲ್ಲೆಯಾದ್ಯಂತ ಒಟ್ಟು 23,904 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 18,749 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಪರೀಕ್ಷೆ ಬರೆದಿದ್ದ 12,004 ಬಾಲಕರಲ್ಲಿ 8,982 ವಿದ್ಯಾ ರ್ಥಿಗಳು ತೇರ್ಗಡೆಯಾಗಿದ್ದು, 11,958 ಬಾಲಕಿಯರಲ್ಲಿ 9,767 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಯಾವ ಶಾಲೆಗೂ ಶೂನ್ಯ ಫಲಿತಾಂಶ ಬಂದಿಲ್ಲ ಎಂದು ಡಿಡಿಪಿಐ ಪ್ರೇಮಾ ಎಚ್.ಎಂ. ತಿಳಿಸಿದ್ದಾರೆ.