×
Ad

ಎಪಿಎಂಸಿ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿ ಚಾಲನೆ

Update: 2016-05-16 22:12 IST

ಚಿಕ್ಕಮಗಳೂರು, ಮೇ 16: 1.56 ಕೋಟಿ ರೂ. ವೆಚ್ಚದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಾಂಕ್ರಿಟೀಕರಣ ಮಾಡಿ ಅಭಿವೃದ್ಧಿ ಪಡಿಸಲಾಗುತ್ತಿರುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಎಂಎಲ್ಸಿ ಡಾ. ಮೋಟಮ್ಮ ತಿಳಿಸಿದ್ದಾರೆ.

ಅವರು ನಗರ ಹೊರವಲಯದ ಎಪಿಎಂಸಿ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿ, ನಬಾರ್ಡ್ ಯೋಜನೆಯಡಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 75ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ನಿರ್ಮಾಣ ಹಾಗೂ 25ಲಕ್ಷ ರೂ. ವೆಚ್ಚದಲ್ಲಿ ಆಲ್ದೂರು ಗ್ರಾಮೀಣ ಸಂತೆಯಲ್ಲಿ ಮುಚ್ಚಿದ್ದ ಹರಾಜು ಕಟ್ಟೆ ಕಾಮಗಾರಿಯನ್ನು ಮಾಡಲಾಗುತ್ತಿದೆ. ಈ ಹಿಂದೆ ಗಾಯಿತ್ರಿ ಶಾಂತೇಗೌಡರು ಎಂಎಲ್ಸಿಯಾಗಿದ್ದ ಸಂದರ್ಭದಲ್ಲಿ ಸ್ಥಳೀಯ ಪ್ರತಿನಿಧಿಗಳು ಎಪಿಎಂಸಿ ಪ್ರಾಂಗಣದ ಅಭಿವೃದ್ಧಿಗೆ ಅನುದಾನ ನೀಡುವಂತೆ ಮಾಡಿದ್ದ ಮನವಿಗೆ ಅವರು ಸ್ಪಂದಿಸಿದ್ದಾರೆ ಎಂದು ಹೇಳಿದರು.

ಎಂಎಲ್ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಜಿಲ್ಲೆ ಹಲವು ಕಡೆಯ ಸಂತೆ ಮಾರುಕಟ್ಟೆಗಳಲ್ಲಿ ಸರಕಾರದ ಅನುದಾನ ಬಳಸಿ ಕಟ್ಟಲಾಗಿರುವ ಕೆಲವು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿರುವುದನ್ನು ನೋಡಿದ್ದೇವೆ. ಆದ್ದರಿಂದ ಕಟ್ಟಡ ಶಾಶ್ವತವಾಗಿ ಬಾಳಿಕೆ ಬಂದು ರೈತರಿಗೆ ಮತ್ತು ವರ್ತಕರಿಗೆ ಅನುಕೂಲವಾಗುವ ರೀತಿ ವ್ಯವಸ್ಥಿತವಾಗಿ ನಿರ್ಮಾಣ ಮಾಡುವತ್ತ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ಎಪಿಎಂಸಿ ಅಧ್ಯಕ್ಷ ಎಸ್.ಟಿ.ಚಂದ್ರೇಗೌಡ ಮಾತನಾಡಿ, ರಾಜ್ಯ ಸರಕಾರ ಈ ಹಿಂದೆಯೂ 1ಕೋಟಿ ರೂ. ಆರ್‌ಕೆವಿವೈ ಯೋಜನೆಯಡಿ ಅನುದಾನ ಎಪಿಎಂಸಿ ಅಭಿವೃದ್ಧಿಗೆ ಬಂದಿದೆ. ಗೋದಾಮು ನಿರ್ಮಾಣ ಕಾಮಕಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಧ್ಯದಲ್ಲೆ ಕೆಲಸ ಆರಂಭವಾಗಲಿದೆ. 1.56 ಕೋಟಿ ರೂ. ನಬಾರ್ಡ್ ಯೋಜನೆಯಲ್ಲಿ ರಸ್ತೆ ಹಾಗೂ ತಾಲೂಕಿನ ವಿವಿಧ ಸಂತೆ ಕಟ್ಟೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ರೈತರು ಹಾಗೂ ವರ್ತಕರಿಗೆ ಅನುಕೂಲವಾಗಲಿದೆ ಎಂದು ನುಡಿದರು.

ಜಿಪಂ ಸದಸ್ಯ ಸೋಮಶೇಖರ್, ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಎಪಿಎಂಸಿ ಉಪಾಧ್ಯಕ್ಷ ವೀರಪ್ಪಗೌಡ, ನಿರ್ದೇಶಕರಾದ ಕೆ.ಪಿ.ವೆಂಕಟೇಶ್, ಭದ್ರೇಗೌಡ, ಡಿ.ಕೆ.ನಿಂಗೇಗೌಡ, ಅಮೀರ್‌ಜಾನ್, ಸಹಾಯಕ ನಿರ್ದೇಶಕ ಬಿ.ಎನ್.ಉಮಾಪತಿ, ಕಾರ್ಯದರ್ಶಿ ಎನ್.ಚಂದ್ರಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News