ರೋಗ ರಹಿತ ಸಮಾಜ ನಿರ್ಮಾಣವಾಗಲಿ:ದಿವಾಕರ್‌ಭಟ್
ಚಿಕ್ಕಮಗಳೂರು, ಮೇ 16: ಶಾರೀರಿಕ, ಮಾನಸಿಕ ಮತ್ತು ಆತ್ಮೀಕ ಸಮಸ್ತ ಶಕ್ತಿಗಳ ವಿಕಾಸದಿಂದ ರೋಗ ರಹಿತ ಸಮಾಜ ನಿರ್ಮಾಣ ಸಾಧ್ಯ. ಪ್ರಾಣಾಯಾಮ ರೋಗ ನಿರೋಧಕ ಎಂದು ಭಾರತ ಸ್ವಾಭಿಮಾನ ಮುಖ್ಯಸ್ಥ ಯೋಗ ಗುರು ದಿವಾಕರ್‌ಭಟ್ ಹೇಳಿದ್ದಾರೆ.
ಅವರು ನಗರದ ಮಾಧ್ಯಮ ಸಂಸ್ಕೃತಿ ಪತಿಷ್ಠಾನ ಸಂಯೋಜನೆಯೊಂದಿಗೆ ಸುವರ್ಣ ಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವ ಶಾಸ್ತ್ರಿ ಸಭಾಂಗಣದಲ್ಲಿ ಉಚಿತ ಬೇಸಿಗೆ ಪ್ರಾಣಾಯಾಮ ಶಿಬಿರ ಸಮಾರೋಪ ದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿ, ಪ್ರಾಣಾಯಾಮ ಮಾಡುವುದರಿಂದ ಗೊಂದಲದ ಬದುಕಿ ನಿಂದ ದೂರವಾಗಿ ಜ್ಞಾನಸಂಪತ್ತನ್ನು ನಮ್ಮದಾಗಿಸಿಕೊಳ್ಳಬಹುದು. ಇದರಿಂದ ನಿತ್ಯ ಆನಂದ ಪಡೆಯಲು ಸಾಧ್ಯ ಎಂದು ಹೇಳಿದರು.
ಔಷಧ ರಹಿತ ಉಪಚಾರ ಮತ್ತು ರೋಗ ರಹಿತ ಸಮಾಜ ನಿರ್ಮಾಣವಾಗಬೇಕು. ಪ್ರಕೃತಿಯಲ್ಲಿ ಸಿಗುವ ಆಮ್ಲಜನಕ ಸದುಪಯೋಗ ಮಾಡಿಕೊಳ್ಳಬೇಕು. ವ್ಯಾಯಾಮ, ಪ್ರಾಣಾಯಾಮ, ಧ್ಯಾನದ ಮೂಲಕ ಪಂಚಕೋಶಗಳ ಶುದ್ಧಿ, ದೀರ್ಘಾವಧಿ ಕಾಯಿಲೆಗಳಿಂದ ವಿಮುಕ್ತಿ ಸಾಧ್ಯ ಎಂದು ದಿವಾಕರಭಟ್, ದೀರ್ಘಾಯುಷ್ಯದ ರಹಸ್ಯ ಪ್ರಾಣಾಯಾಮದಲ್ಲಿದೆ ಎಂದರು.
ಆಹಾರ ಔಷಧವಾಗಬೇಕಿತ್ತು. ಆದರೆ ಇಂದು ಔಷಧವೇ ಆಹಾರವಾಗುತ್ತಿದೆ. ಹಲವು ಮನೆಗಳಲ್ಲಿ ಔಷಧ ಮಾತ್ರೆಗಳ ಚಿಕ್ಕ ಅಂಗಡಿಯೆ ಇರುತ್ತದೆ. ಯೋಗ, ಪ್ರಾಣಾಯಾಮ ಭಾರತದ ಪುರಾತನ ಆಸ್ತಿ ಇದನ್ನು ನಾವು ಮರೆತಿದ್ದು, ವಿದೇಶಿಯರು ಹೆಚ್ಚು ಆಸಕ್ತಿತೋರಿಸಿದ ನಂತರ ನಾವು ಎಚ್ಚೆತ್ತುಕೊಳ್ಳುತ್ತಿದ್ದೇವೆ ಎಂದು ನುಡಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿ, ಕಾರ್ಯದರ್ಶಿ ಸುಮಿತ್ರಾಶಾಸ್ತ್ರಿ ವಂದಿಸಿದರು.
ಶಿಬಿರಾರ್ಥಿಗಳಾದ ದೇವೇಗೌಡ, ಕಮಲಾಕ್ಷಿ, ಯಶೋಧ, ಪಾರ್ವತಿಬಸವರಾಜ್, ಚನ್ನಬಸಮ್ಮ, ಸಿ.ಆರ್.ಪ್ರಜ್ವಲ್‌ಶಾಸ್ತ್ರಿ ಶಿಬಿರದ ಅನುಭವಗಳನ್ನು ಹಂಚಿಕೊಂಡರು.
ಕಾರವಾರ: ಕೃತಕ ಅಂಗಾಂಗ ಜೋಡಣಾ ಶಿಬಿರ ಕಾರವಾರ, ಮೇ 16: ಬಡವ ಹಾಗೂ ನಿರ್ಗತಿಕರ ಸೇವೆ ಮಾಡುವುದು ದೇವರ ಪೂಜೆ ಮಾಡುವುದಕ್ಕಿಂತಲೂ ಶ್ರೇಷ್ಠ ಎಂದು ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ ಹೇಳಿದರು.
ಅವರು ಎಲ್ಲ ರಂಗಮಂದಿರದಲ್ಲಿ ರೋಟರಿ ಕ್ಲಬ್ ಹಾಗೂ ಸಾದು ವಾಸ್ವಾನಿ ಟ್ರಸ್ಟ್ ವತಿಯಿಂದ ನಡೆಸಲಾದ ಅಂಗವಿಕಲರಿಗೆ ಅಂಗಾಂಗ ಜೋಡಣಾ ಶಿಬಿರ ಉದ್ಘಾಟಿಸಿ ಮಾತನಾಡಿ. ವಿವಿಧ ಕಾರಣಗಳಿಂದ ಅಂಗಾಂಗಗಳನ್ನು ಕಳೆದುಕೊಂಡ ಬಡ ಜನರು ಆರ್ಥಿಕವಾಗಿ ಸಬಲರಾಗಿರದ ಕಾರಣ ಜೀವನವಿಡೀ ನರಳಾಡುತ್ತಾರೆ. ಅಂಗವಿಕಲತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅಂಗಾಂಗ ಜೋಡಣೆಗೆ ಸಾಮಾಜಿಕ ಸಂಸ್ಥೆಗಳು ಮುಂದೆ ಬಂದಿರುವುದು ಪ್ರಶಂಸನೀಯ, ದೇವರ ಪೂಜೆ ಮಾಡುವುದಕ್ಕಿಂತಲೂ ಬಡವರಿಗೆ ಒಳಿತಾಗುವಂತಹ ಕೆಲಸ ಮಾಡಿದಲ್ಲಿ ಹೆಚ್ಚಿನ ಸಂತೋಷ ಸಿಗುತ್ತದೆ. ಮನಸ್ಸಿಗೂ ನೆಮ್ಮದಿ ಇರುತ್ತದೆ ಎಂದು ಅವರು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಪ್ರದೀಪ ನಾಯಕ ಮಾತನಾಡಿ, ಬಡವರ ಸೇವೆ ಮಾಡಲು ಇತರ ಸಾಮಾಜಿಕ ಸಂಸ್ಥೆಗಳು ಕೂಡ ಮುಂದೆ ಬರಬೇಕಿದೆ. ರೋಟರಿ ಸಂಸ್ಥೆಯ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುವುದು ಸಮಾಜದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ರೋಟರಿ ಪ್ರಮುಖ ದೀಪಕ ಅಣ್ವೇಕರ್ ಮಾತನಾಡಿದರು. ರೋಟರಿ ಸದಸ್ಯ ರಾಜೇಶ್ ಸುರಾಮ, ಸಾದು ವಾಸ್ವಾನಿ ಟ್ರಸ್ಟ್‌ನ ಡಾ. ಸಲೀಲ ಜೈನ್, ಮಿಲಿಂದ್ ಜಾದವ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಲವು ಅಂಗವಿಕಲರು ಕೃತಕ ಅಂಗಾಂಗ ಜೋಡಣೆಗೆ ಹೆಸರು ನೋಂದಾಯಿಸಿದ್ದು, ಅವರ ಅಂಗಾಂಗಗಳ ಅಳತೆ ಪಡೆಯಲಾಯಿತು. ಮುಂದಿನವಾರ ಮತ್ತೊಂದು ಶಿಬಿರ ಏರ್ಪಡಿಸಿ ಕೃತಕ ಅಂಗಾಂಗಗಳನ್ನು ಜೋಡಿಸುವ ಭರವಸೆ ನೀಡಲಾಯಿತು.
ಮಾರುತಿ ಕಾಮತ್ ನಿರ್ವಹಿಸಿದರು. ಚಂದ್ರಶೇಖರ್ ವಂದಿಸಿದರು.