ವೇತನ ಪರಿಷ್ಕರಣೆ: ಕ್ರಮ ಕೈಗೊಂಡಿದ್ದರೂ ಪ್ರತಿಭಟನೆ ಬಿಡದ ಆಸ್ಪತ್ರೆ ಸಿಬ್ಬಂದಿ
ಶಿವಮೊಗ್ಗ, ಮೇ16: ರಾಜ್ಯದ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಲ್ಲಿ ಕಾರ್ಯನಿರ್ವಹಣೆ ಮಾಡುವ ಕಾರ್ಮಿಕರ ವೇತನ ಪರಿಷ್ಕರಣೆಗೆ ಕಳೆದ ಕೆಲ ತಿಂಗಳುಗಳ ಹಿಂದೆಯೇ ರಾಜ್ಯ ಸರಕಾರ ನಿರ್ಧಾರ ಕೈಗೊಂಡಿದೆ. ಈ ಕುರಿತಂತೆ ಅಧಿಕೃತ ಅಧಿಸೂಚನೆ ಕೂಡ ಹೊರಡಿಸಿದೆ. ಎಪ್ರಿಲ್ ತಿಂಗಳಿನಿಂದಲೇ ಪೂರ್ವಾನ್ವಯವಾಗುವಂತೆ ವೇತನ ಹೆಚ್ಚಳ ಆದೇಶ ಹೊರಡಿಸಲು ಸರಕಾರ ನಿರ್ಧರಿಸಿದೆ. ಈ ಕುರಿತಂತೆ ಜ.14, 2016 ರಂದು ಹೊರಡಿಸಲಾದ ಕರ್ನಾಟಕ ರಾಜ್ಯ ಪತ್ರದಲ್ಲಿಯೂ ಮಾಹಿತಿ ಪ್ರಕಟಿಸಿದೆ. ಆಕ್ಷೇಪಣೆ ಸಲ್ಲಿಸಲು ಕಾಲಾವಧಿ ನಿಗದಿ ಮಾಡಿದ್ದು, ತದನಂತರ ಅಧಿಕೃತ ಆದೇಶ ಜಾರಿಗೊಳಿಸಲಿದೆ. ರಾಜ್ಯ ಸರಕಾರದ ಈ ಕ್ರಮದ ಹೊರತಾಗಿಯೂ, ಶಿವಮೊಗ್ಗ ಸರಕಾರಿ ಮೆಗ್ಗಾನ್ ಆಸ್ಪತ್ರೆಯ ಮ್ಯಾನ್‌ಪವರ್ ಏಜೆನ್ಸಿ ಮೂಲಕ ಕಾರ್ಯನಿರ್ವಹಣೆ ಮಾಡುತ್ತಿರುವ ನೂರಾರು ನೌಕರರು ಸೋಮವಾರ ಕರ್ತವ್ಯ ಬಹಿಷ್ಕರಿಸಿ ರೋಗಿಗಳಿಗೆ ತೊಂದರೆ ಉಂಟಾಗುವಂತೆ ಮಾಡಿದ್ದಕ್ಕೆ, ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗುವಂತಾಗಿದೆ. ಸರಕಾರದ ಆದೇಶ: 1948 ರ ಕನಿಷ್ಠ ವೇತನ ಕಾಯ್ದೆಯಡಿ ರಾಜ್ಯದ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ವೇತನ ಪರಿಷ್ಕರಣೆಗೆ ಸರಕಾರ ಅಧಿಸೂಚನೆ ಹೊರಡಿಸಿದೆ. ಎ.ತಿಂಗಳಿನಿಂದಲೇ ಪೂರ್ವಾನ್ವಯವಾಗುವಂತೆ ಆದೇಶ ಹೊರಡಿಸಿದೆ. ಈ ಕುರಿತಂತೆ ರಾಜ್ಯ ಪತ್ರದಲ್ಲಿಯೂ ಪ್ರಕಟನೆ ಹೊರಡಿಸಿದೆ. ವೇತನ ಪರಿಷ್ಕರಣೆಯ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಎರಡು ತಿಂಗಳ ಕಾಲಾವಾಕಾಶ ನೀಡಿದೆ. ಪ್ರಸ್ತುತ ಸರಕಾರದ ಅಧಿಸೂಚನೆಯ ಪ್ರಕಾರ ಸ್ಟಾಫ್ ನರ್ಸ್‌ಗಳಿಗೆ 10,790 ರೂ. ಹಾಗೂ ಸ್ವೀಪರ್ ಇತರರಿಗೆ 10,010 ರೂ. ವೇತನ ಲಭಿಸಲಿದೆ. ಶಿವಮೊಗ್ಗ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯು ಅಪಘಾತ ಭತ್ತೆ ಎಂದು 2,000 ರೂ.ವನ್ನು ಹೊರಗುತ್ತಿಗೆ ಕಾರ್ಮಿಕರಿಗೆ ನೀಡುತ್ತಿದೆ. ಒಟ್ಟಾರೆ ಈ ವರ್ಗದವರಿಗೂ ಮುಂದಿನ ದಿನಗಳಲ್ಲಿ ಮಾಸಿಕ ಸರಿಸುಮಾರು 13 ಸಾವಿರ ರೂ. ವೇತನ ದೊರಕಲಿದೆ.
ಮಾಹಿತಿಯ ಕೊರತೆ: ರಾಜ್ಯ ಸರಕಾರ ವೇತನ ಪರಿಷ್ಕರಣೆಗೆ ಮುಂದಾಗಿರುವ ಮಾಹಿತಿ ಬಹುತೇಕ ಹೊರಗುತ್ತಿಗೆ ನೌಕರರಿಗೆ ಇಲ್ಲ. ಮುಖಂಡರು ಕೂಡ ಈ ಕುರಿತಂತೆ ತಿಳಿ ಹೇಳುವ ಪ್ರಯತ್ನ ನಡೆಸಿಲ್ಲ. ಇತ್ತೀಚೆಗೆ ಸೆಕ್ಯುರಿಟಿ ಗಾರ್ಡ್‌ಗಳ ವೇತನ ಹೆಚ್ಚಳ ಮಾಡಲಾಗಿದ್ದು, ಅದರಂತೆ ತಮ್ಮ ವೇತನದಲ್ಲಿಯೂ ಏರಿಕೆ ಮಾಡುವಂತೆ ಕರ್ತವ್ಯ ಬಹಿಷ್ಕರಿಸಿ ಹೋರಾಟಕ್ಕಿಳಿದಿದ್ದಾರೆ. ಸಮರ್ಪಕ ಮಾಹಿತಿ ಅರಿತುಕೊಂಡಿದ್ದರೆ ನೌಕರರು ಮುಷ್ಕರಕ್ಕಿಳಿಯುತ್ತಿರಲಿಲ್ಲ ಎಂದು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಅಭಿಪ್ರಾಯಪಡುತ್ತಾರೆ.