ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪೌರ ಕಾರ್ಮಿಕರ ನೇಮಕ ಸ್ಥಗಿತ: ಸಚಿವ ಸೊರಕೆ
ಬೆಂಗಳೂರು, ಮೇ 16: ಗುತ್ತಿಗೆ ಪೌರ ಕಾರ್ಮಿಕರ ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ 2017ರ ಮಾರ್ಚ್ ವೇಳೆ ರಾಜ್ಯದ ಮಹಾನಗರ ಪಾಲಿಕೆಗಳೂ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪೌರ ಕಾರ್ಮಿಕರ ನೇಮಕಾತಿ ಸ್ಥಗಿತಗೊಳಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.
ಸೋಮವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಗುತ್ತಿಗೆ ಪೌರ ಕಾರ್ಮಿಕರನ್ನು ಹಂತ-ಹಂತವಾಗಿ ಖಾಯಂಗೊಳಿ ಸಲಾಗುವುದು. ಅವರಿಗೆ ವೇತನ, ಭತ್ತೆ ಸೇರಿದಂತೆ 13 ಸಾವಿರ ರೂ.ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಹಾನಗರ ಪಾಲಿಕೆಗಳು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ 12ಸಾವಿರ ಮಂದಿ ಪೌರ ಕಾರ್ಮಿಕರ ಪೈಕಿ ಈಗಾಗಲೇ 8 ಸಾವಿರ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲಾಗಿದೆ. ಉಳಿದ ನಾಲ್ಕು ಸಾವಿರ ಪೌರ ಕಾರ್ಮಿಕರನ್ನು ಖಾಯಂ ಸಂಬಂಧ ನೀತಿಯನ್ನು ರೂಪಿಸಲಾಗುವುದು ಎಂದು ವಿವರಿಸಿದರು.
ತೆರಿಗೆ ಸಂಗ್ರಹ ದ್ವಿಗುಣ: ಮಹಾನಗರ ಪಾಲಿಕೆಗಳು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಸಂಗ್ರಹಕ್ಕೆ ನೂತನ ಸಾಫ್ಟ್‌ವೇರ್ ರೂಪಿಸಲಾಗಿದೆ ಎಂದ ಅವರು, ಆಸ್ತಿಗಳನ್ನು ಗುರುತಿಸಿ ಸಮರ್ಪಕ ತೆರಿಗೆ ಸಂಗ್ರಹಿಸಲು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ 16 ಕೋಟಿ ರೂ.ತೆರಿಗೆ ಸಂಗ್ರಹಿಸಲಾಗುತ್ತಿತ್ತು. ಇದೀಗ 23 ಕೋಟಿ ರೂ.ಸಂಗ್ರಹಿಸಿದ್ದು, 30 ಕೋಟಿ ರೂ.ಗಳಷ್ಟು ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು 50 ಕೋಟಿ ರೂ.ಗಳಿಗೆ ವಿಸ್ತರಿಸಬಹುದು ಎಂದು ಅವರು ವಿವರ ನೀಡಿದರು.
ಅಮೃತ ಯೋಜನೆ: ಕೇಂದ್ರದ ‘ಅಮೃತ್ ಯೋಜನೆ’ಯಡಿ 1ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ 27 ನಗರಗಳಲ್ಲಿ ನೀರು, ಒಳಚರಂಡಿ ಸೇರಿ ಮೂಲ ಸೌಕರ್ಯ ಅಭಿವೃದ್ಧಿಗೆ 1,258 ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗಾಗಲೇ ಕೇಂದ್ರ-118 ಕೋಟಿ ರೂ. ಹಾಗೂ ರಾಜ್ಯ- 50ಕೋಟಿ ರೂ. ಸೇರಿ ಒಟ್ಟು 168 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಪರಿಷ್ಕೃತ ಪ್ರಸ್ತಾವನೆ: ಕೇಂದ್ರದ ಸ್ಮಾರ್ಟ್‌ಸಿಟಿ ಯೋಜನೆಯಡಿ ರಾಜ್ಯದ ಆರು ನಗರ ಗಳನ್ನು ಆಯ್ಕೆ ಮಾಡಿದ್ದು, ಆ ನಗರಗಳ ಅಭಿವೃದ್ಧಿಗೆ ‘ವಿಷನ್ ಡಾಕ್ಯುಮೆಂಟ್’ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಬೆಳಗಾವಿ ಮತ್ತು ದಾವಣಗೆರೆ ನಗರಗಳ ಅಭಿವೃದ್ಧಿಗೆ ತಲಾ 1,500 ಕೋಟಿ ರೂ. ನೀಡಲು ಕೇಂದ್ರ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.