ಆರ್‌ಟಿಇ ಕಾಯ್ದೆ: ಆಯ್ಕೆಯಾದ ಎಲ್ಲರಿಗೂ ಸೀಟು ಹಂಚಿಕೆಗೆ ಒತ್ತಾಯ
ಬೆಂಗಳೂರು, ಮೇ 16: ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿ ಸೀಟು ಹಂಚಿಕೆ ಯಾಗಬೇಕು ಎಂದು ಒತ್ತಾಯಿಸಿ ಎಸ್‌ಎಫ್‌ಐ ಮತ್ತು ಪೋಷಕರ ಸಂಘಟನೆ ಕಾರ್ಯಕರ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಎದುರು ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಎಫ್‌ಐ ಕಾರ್ಯದರ್ಶಿ ಗುರುರಾಜ್ ದೇಸಾಯಿ, ಪ್ರಸಕ್ತ ಸಾಲಿನ ಆರ್‌ಟಿಐ ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿಗಳ ಮೊದಲನೆ ಹಂತದ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಆದರೆ, ಇದರಲ್ಲಿ ವಾರ್ಡ್‌ನ್ನು ಪರಿಗಣಿ ಸದೇ ಆಯ್ಕೆ ಮಾಡಲಾಗಿದೆ. ಇದರ ಪರಿಣಾಮ ವಾರ್ಡ್ ಸರಿಹೊಂದುತ್ತಿಲ್ಲ ಎಂದು ಖಾಸಗಿ ಶಾಲೆಗಳಲ್ಲಿ ಪ್ರವೇಶವನ್ನು ನೀಡದೇ ಅರ್ಜಿಯನ್ನು ತಿರಸ್ಕೃರಿಸಲಾ ಗುತ್ತಿದೆ. ಇದರಿಂದ ಆಯ್ಕೆಯಾದ ನೂರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಆದುದರಿಂದ ಶಿಕ್ಷಣ ಇಲಾಖೆ ವಾರ್ಡ್ ಕಲ್ಪನೆಯನ್ನು ಕೈ ಬಿಡಬೇಕು. ಕೂಡಲೇ ಆಯ್ಕೆಯಾದ ಎಲ್ಲರಿಗೂ ಸೀಟು ಸಿಗುವ ಹಾಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದಾಖಲಾತಿಯನ್ನು ಪರಿಶೀಲನೆ ಮಾಡುವಾಗ ವಾರ್ಡ್‌ಗಳನ್ನು ಗಮನಿಸದೇ ಸೀಟನ್ನು ಹಂಚಿಕೆ ಮಾಡಲಾಗಿದೆ. ಆದರೆ, ಈಗ ನೀವು ಈ ವಾರ್ಡ್‌ಗೆ ಸೇರುವುದಿಲ್ಲ ಎಂದು ಹೇಳಿ ಪ್ರವೇಶ ತಡೆಹಿಡಿಯುತ್ತಿರುವುದು ಸರಿಯಾದ ಕ್ರಮವಲ್ಲ. ಇಲಾಖೆಯಿಂದ ನಡೆದ ತಪ್ಪಿ ನಿಂದಾಗಿ ಇಂದು ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಕೂಡಲೇ ಗೊಂದಲಗಳನ್ನು ನಿವಾರಿಸಿ, ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಆನ್‌ಲೈನ್‌ನಲ್ಲಿ ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ವಾರ್ಡನ್ನು ಪತ್ತೆ ಹಚ್ಚುವುದಕ್ಕೆ ಕಾಲಂ ನೀಡಲಾಗಿತ್ತು. ಆದರೆ, ಈಗ ವಾರ್ಡ್ ಬದಲಾಗಿದೆ ಎಂದು ಅರ್ಜಿಯನ್ನು ತಿರಸ್ಕೃತಗೊಳಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ವಿದ್ಯಾರ್ಥಿ, ಪೋಷಕರ ಬದುಕಿನ ಮೇಲೆ ಚೆಲ್ಲಾಟವಾಡಬಾರದು. ಆದುದರಿಂದ ಕೂಡಲೇ ಇಲಾಖೆ ತನ್ನ ತಪ್ಪು ನಿರ್ಧಾರದಿಂದ ಹೊರ ಬಂದು ಅರ್ಜಿ ಸಲ್ಲಿಸಿ ಆಯ್ಕೆಯಾದ ಎಲ್ಲ ಮಕ್ಕಳಿಗೂ ಸೀಟನ್ನು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್ ಮಾತ ನಾಡಿ, ಖಾಸಗಿ ಶಾಲೆಗಳಲ್ಲಿ ಡೊನೆಷನ್ ಹಾವಳಿ ನಿಯಂತ್ರಣ ಮಾಡಲಿಕ್ಕಾಗಿ ‘ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ’ ಹಾಗೂ ತಾಲೂಕು ಮಟ್ಟದಲ್ಲಿ ತಾಲೂಕು ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿ ಕಾರವನ್ನು ರಚನೆ ಮಾಡಬೇಕು.
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರು, ಶಿಕ್ಷಣ ಇಲಾಖೆ ಮುಖ್ಯಸ್ಥರು, ಪಾಲಕರು, ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳ ಜಂಟಿ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಆಪ್ತ ಕಾರ್ಯದರ್ಶಿ ವೆಂಕಟೇಶ್, ಆಯುಕ್ತರ ಜೊತೆ ಮಾತನಾಡಿ ಸಭೆಯನ್ನು ಕರೆದು ಈ ಕುರಿತು ಚರ್ಚೆ ಮಾಡಿ ಸಮಸ್ಯೆಯನ್ನು ಬಗೆಹರಿಸು ವುದಾಗಿ ಭರವಸೆಯನ್ನು ನೀಡಿದರು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಉಪಾಧ್ಯಕ್ಷ ಅಮ ರೇಶ್ ಕಡಗದ್, ಜಿಲ್ಲಾಧ್ಯಕ್ಷ ವೆಂಕಟೇಶ್, ಸೌಮ್ಯಾ, ಹನುಮಂತ ದುರ್ಗದ್, ಎಆರ್‌ಡಿಯು ಮುಖಂಡ ನರಸಿಂಹಮೂರ್ತಿ, ರುದ್ರಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.