ಅಂಕಿತ ಹಾಕಲು ರಾಜ್ಯಪಾಲರ ನಿರಾಕರಣೆ
ಬೆಂಗಳೂರು, ಮೇ 16: ಸರಕಾರಿ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ-ವರ್ಗದವರಿಗೆ ಮೀಸಲಾತಿ ಕಲ್ಪಿಸುವ ಸುಗ್ರೀವಾಜ್ಞೆಗೆ ಕಡತವನ್ನು ರಾಜ್ಯ ಸರಕಾರ ವಾಪಸ್ ಕಳುಹಿಸಿದ್ದ ರಾಜ್ಯಪಾಲರು, ಇದೀಗ ‘ಗ್ರಾಮೀಣ ವಿಶ್ವ ವಿದ್ಯಾನಿಲಯ ಸ್ಥಾಪಿಸುವ ಸುಗ್ರೀವಾಜ್ಞೆ’ಗೆ ಅಂಕಿತ ಹಾಕಲು ನಿರಾಕರಿಸಿದ್ದಾರೆ.
ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಗ್ರಾಮೀಣ ವಿಶ್ವ ವಿದ್ಯಾನಿಲಯ ಸ್ಥಾಪಿಸಲು ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ತೀರ್ಮಾನ ಕೈಗೊಂಡಿತ್ತು. ಅದರನ್ವಯ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಅಂಕಿತಕ್ಕೆ ರವಾನಿಸಲಾಗಿತ್ತು.
ಆದರೆ, ಸುಗ್ರೀವಾಜ್ಞೆಗೆ ಅಂಕಿತ ಹಾಕಲು ರಾಜ್ಯಪಾಲ ವಜುಭಾಯಿ ವಾಲಾ ನಿರಾಕರಿಸಿದ್ದು, ನೂತನ ವಿಶ್ವವಿದ್ಯಾನಿಲಯ ಸ್ಥಾಪನೆ ಸಂಬಂಧದ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲರ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಗ್ರಾಮೀಣ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂಬ ರಾಜ್ಯ ಸರಕಾರದ ಆಶಯಕ್ಕೆ ಪೆಟ್ಟುಬಿದ್ದಿದೆ. ರಾಜ್ಯ ಸರಕಾರ ಹಾಗೂ ರಾಜಭವನದ ಮಧ್ಯೆ ಮುಸುಕಿನ ಗುದ್ದಾಟದಲ್ಲಿ ರಾಜ್ಯದ ಜನತೆ ಕಷ್ಟಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ರಾಜ್ಯಪಾಲರು ನೂತನ ಲೋಕಾಯುಕ್ತ ಸ್ಥಾನಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡಿದ್ದ ನ್ಯಾ.ಎಸ್.ಆರ್.ನಾಯಕ್ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಆ ಬಳಿಕ ಸರಕಾರಿ ಕಾಮಗಾರಿಗಳಲ್ಲಿ ಎಸ್ಸಿ-ಎಸ್ಟಿ ವರ್ಗದವರಿಗೆ ಮೀಸಲಾತಿ ಕಲ್ಪಿಸುವ ಸುಗ್ರೀವಾಜ್ಞೆಗೂ ಅಂಕಿತ ಹಾಕಿರಲಿಲ್ಲ. ಇದೀಗ ಗ್ರಾಮೀಣ ವಿಶ್ವ ವಿದ್ಯಾನಿಲಯ ಸ್ಥಾಪನೆಗೆ ತಣ್ಣೀರು ಎರಚಿದಂತಾಗಿದೆ.