×
Ad

ತಂದೆ-ತಾಯಿ, ಗುರುಗಳಿಗೆ ಆಭಾರಿಯಾಗಿದ್ದೇನೆ: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ರಂಜನ್

Update: 2016-05-16 23:43 IST

 - ಬಿ. ರೇಣುಕೇಶ್

ಶಿವಮೊಗ್ಗ, ಮೇ 16: ‘ರ್ಯಾಂಕ್ ಬರುವ, ಅತೀ ಹೆಚ್ಚು ಅಂಕ ಗಳಿಸುವ ನಿರೀಕ್ಷೆಯಿತ್ತು. ಆದರೆ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸುತ್ತೇನೆ, 625ಕ್ಕೆ 625 ಅಂಕ ಗಳಿಸುತ್ತೇನೆ ಎಂದು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ. ನಿಜಕ್ಕೂ ಆಶ್ಚರ್ಯವಾಗುತ್ತಿದೆ ಹಾಗೂ ಸಂತಸವಾಗುತ್ತಿದೆ. ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ.

ನನ್ನ ಈ ಸಾಧನೆಗೆ ತಂದೆ-ತಾಯಿಯ ಪ್ರೋತ್ಸಾಹ ಹಾಗೂ ವಿದ್ಯೆ ಹೇಳಿಕೊಟ್ಟ ಗುರುಗಳ ಮಾರ್ಗದರ್ಶನ ಕಾರಣವಾಗಿದೆ. ಇವರಿಗೆ ನಾನು ಮೊದಲ ಧನ್ಯವಾದ ಅರ್ಪಿಸುತ್ತೇನೆ. ಇವರಿಗೆ ನಾನು ಆಭಾರಿಯಾಗಿದ್ದೇನೆ.’

ಇದು ಎಸೆಸೆಲ್ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ, 625 ಅಂಕಗಳಿಗೆ 625 ಅಂಕ ಪಡೆದ ಭದ್ರಾವತಿಯ ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿ ಬಿ.ಎಸ್.ರಂಜನ್ ಮನದಾಳದ ಮಾತುಗಳು. ಪ್ರಥಮ ರ್ಯಾಂಕ್ ಪಡೆದ ವಿಷಯ ತಿಳಿಯುತ್ತಿದ್ದಂತೆ ಭದ್ರಾವತಿ ಪಟ್ಟಣದ ಕಡದಕಟ್ಟೆಯಲ್ಲಿರುವ ಆತನ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಅವರ ಮನೆಯವರ ಮೊಬೈಲ್‌ಗಳು ಬಿಡುವಿಲ್ಲದೆ ರಿಂಗಣಿಸುತ್ತಿದ್ದವು. ಬಂಧು-ಬಳಗ, ಹಿತೈಷಿ, ಸ್ನೇಹಿತರು, ನೆರೆಹೊರೆಯವರಿಂದ ಮನೆ ತುಂಬಿ ತುಳುಕುತ್ತಿತ್ತು.

ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿತ್ತು. ಇದರ ಜೊತೆಗೆ ಪತ್ರಕರ್ತರ ದೊಡ್ಡ ಸಮೂಹವೇ ನೆರೆದಿತ್ತು. ಬಿ.ಎಸ್.ರಂಜನ್ ಹಾಗೂ ಆತನ ಪೋಷಕರ ಸಂದರ್ಶನಕ್ಕೆ ಮಾಧ್ಯಮಗಳು ಪೈಪೋಟಿ ನಡೆಸುತ್ತಿದ್ದವು. ಒಂದು ರೀತಿ ಹಬ್ಬದ ವಾತಾವರಣ ಕಂಡುಬರುತ್ತಿತ್ತು.

ಸಂತಸವಾಗುತ್ತಿದೆ: ಪತ್ರಕರ್ತರೊಂದಿಗೆ ಬಿ.ಎಸ್.ರಂಜನ್ ಮಾತನಾಡಿ, ‘620 ಅಂಕ ಗಳಿಸುವ ನಿರೀಕ್ಷೆ ಮಾಡಿದ್ದೆ. ಆದರೆ ಪೂರ್ಣ ಪ್ರಮಾಣದ 625 ಅಂಕ ಗಳಿಸುತ್ತೇನೆ ಎಂದು ತಿಳಿದುಕೊಂಡಿರಲಿಲ್ಲ. ಅಂದಿನ ಅಭ್ಯಾಸವನ್ನು ಅಂದೇ ಮಾಡುತ್ತಿದ್ದೆ. ಬೆಳಗ್ಗೆ ಸುಮಾರು 3 ರಿಂದ 4 ಗಂಟೆಯ ಕಾಲ ಹಾಗೂ ಸಂಜೆಯ ವೇಳೆ ಸುಮಾರು 2 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಹೆಚ್ಚು ಟಿ.ವಿ. ನೋಡುತ್ತಿರಲಿಲ್ಲ’ ಎಂದು ಹೇಳುತ್ತಾರೆ.

ಶಾಲೆಯಲ್ಲಿ ನಡೆಯುತ್ತಿದ್ದ ಪಾಠ-ಪ್ರವಚನವನ್ನು ಆಸಕ್ತಿಯಿಂದ ಕೇಳುತ್ತಿದೆ. ಮನೆಗೆ ಆಗಮಿಸಿ ಪುನಾರಾವರ್ತನೆ ಮಾಡುತ್ತಿದ್ದೆ. ಶಿಕ್ಷಕರು ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದೆ. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಿದ್ದೆ. ನಿರಂತರ, ಕ್ರಮಬದ್ಧ ಅಭ್ಯಾಸ ಮಾಡುತ್ತಿದ್ದೆ ಎಂದು ಬಿ.ಎಸ್.ರಂಜನ್ ಹೇಳುತ್ತಾರೆ.

ಟ್ಯೂಷನ್‌ಗೆ ಹೋಗಿಲ್ಲ: ತಂದೆ ಶಂಕರನಾರಾಯಣ ಹಾಗೂ ತಾಯಿ ತ್ರಿವೇಣಿಯವರಿಗೆ ಇಬ್ಬರು ಮಕ್ಕಳಿದ್ದು, ಪ್ರಥಮ ರ್ಯಾಂಕ್‌ಗಳಿಸಿರುವ ಬಿ.ಎಸ್.ರಂಜನ್ ಕೊನೆಯವನಾಗಿದ್ದಾನೆ. ಇವರ ಮಗಳು ರಚನಾ ಎಂಎಸ್ಸಿ ಪದವಿ ಅಭ್ಯಾಸ ಮಾಡುತ್ತಿದ್ದಾರೆ. ಮಗನ ಸಾಧನೆಗೆ ಪೋಷಕರು ಅಪಾರ ಸಂಭ್ರಮ, ಸಂತಸ ವ್ಯಕ್ತಪಡಿಸುತ್ತಾರೆ. ‘ಮಗನನ್ನು ಟ್ಯೂಷನ್‌ಗೆ ಕಳುಹಿಸಿಲ್ಲ. ಮನೆಯಲ್ಲಿಯೇ ಅಭ್ಯಾಸ ಮಾಡುತ್ತಿದ್ದ. ಉನ್ನತ ಸಾಧನೆ ಮಾಡುವ ನಿರೀಕ್ಷೆಯಿತ್ತು. ಆದರೆ, ಪ್ರಥಮ ರ್ಯಾಂಕ್ ಗಳಿಸುತ್ತಾನೆ, 625ಕ್ಕೆ 625 ಅಂಕ ಪಡೆಯುತ್ತಾನೆ ಎಂದು ಯೋಚಿಸಿರಲಿಲ್ಲ. ಮಗನ ಸಾಧನೆಯು ತಮ್ಮ ಜೀವಮಾನದಲ್ಲಿನ ಅವಿಸ್ಮರಣೀಯ ಘಟನೆಯಾಗಿದೆ. ಸಂತಸ ವಾಗುತ್ತಿದೆ’ ಎಂದು ತಂದೆ ಶಂಕರ ನಾರಾಯಣರವರು ಹೇಳುತ್ತಾರೆ.

ನರ್ಸರಿಯಿಂದ ಎಲ್‌ಕೆಜಿಯವರೆಗೆ ಒಂದೇ ಶಾಲೆ: ಬಿ.ಎಸ್.ರಂಜಿತ್ ಭದ್ರಾವತಿ ಪಟ್ಟಣದ ಪೂರ್ಣಪ್ರಜ್ಞ ಶಾಲೆಯಲ್ಲಿಯೇ ನರ್ಸರಿಯಿಂದ ತೊಡಗಿ 10ನೆ ತರಗತಿಯವರೆಗೆ ಒಂದೇ ಶಾಲೆಯಲ್ಲಿ ಅಭ್ಯಾಸ ಮಾಡಿರುವುದು ವಿಶೇಷವಾಗಿದೆ. ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿರುವ ಬಿ.ಎಸ್.ರಂಜನ್ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ಅಭ್ಯಾಸ ಮಾಡಿದ್ದಾನೆ. ಉಳಿದಂತೆ ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆಯಾಗಿ ಕನ್ನಡ ಅಭ್ಯಾಸ ಮಾಡಿದ್ದಾನೆ. ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಯಲ್ಲಿಯೂ ಈತ ಮುಂದಿದ್ದ. ಶಾಲೆಯ ಅತ್ಯುತ್ತಮ ಥ್ರೋಬಾಲ್ ಕ್ರೀಡಾಪಟುಗಳಲ್ಲಿ ಓರ್ವನಾಗಿದ್ದ.

ಶಿಕ್ಷಕರ ಸಂಭ್ರಮ: ವಿದ್ಯಾರ್ಥಿಯ ಈ ಅಭೂತಪೂರ್ವ ಸಾಧನೆಗೆ ಶಾಲೆಯ ಶಿಕ್ಷಕ ವರ್ಗ, ಆತನ ಸಹಪಾಠಿಗಳು ಅಪಾರ ಸಂತಸ ವ್ಯಕ್ತಪಡಿಸುತ್ತಾರೆ. ಈತನಿಂದ ನಮ್ಮ ಶಾಲೆಯು ಇಡೀ ರಾಜ್ಯದಲ್ಲಿ ಗುರುತಿಸುವಂತಾಗಿದೆ. ನಿಜಕ್ಕೂ ಇದೊಂದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಲೆಯ ಶಿಕ್ಷಕ ವರ್ಗ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

‘ಅಪರೂಪದ ವಿದ್ಯಾರ್ಥಿ’: ರಂಜನ್ ನಿಜಕ್ಕೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂದಿದ್ದ. ನರ್ಸರಿಯಿಂದ ಎಸೆಸೆಲ್ಸಿಯವರೆಗೂ ನಮ್ಮ ಶಾಲೆಯಲ್ಲಿಯೇ ಅಭ್ಯಾಸ ಮಾಡಿದ್ದಾನೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸುವುದರ ಜೊತೆಗೆ 625ಕ್ಕೆ 625 ಅಂಕ ಗಳಿಸಿ ತೇರ್ಗಡೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಯ ಈ ಸಾಧನೆಗೆ ಕಾರಣಕರ್ತರಾದ ನಮ್ಮ ಶಾಲೆಯ ಶಿಕ್ಷಕ ವರ್ಗ, ಆಡಳಿತ ಮಂಡಳಿಯ ಪ್ರಮುಖರಿಗೂ ಅಭಿನಂದನೆ ಅರ್ಪಿಸುತ್ತೆನೆ.
-ಅಮರೇಗೌಡ, ಭದ್ರಾವತಿ ಪೂರ್ಣಪ್ರಜ್ಞಾ ಶಾಲೆಯ ಪ್ರಾಂಶುಪಾಲ


ಶಿಷ್ಯನ ಅಗಣಿತ ಸಾಧನೆ
‘ಸಂತಸವಾಗುತ್ತಿದೆ. ಏನು ಹೇಳಬೇಕು ಎಂದೇ ತೋಚುತ್ತಿಲ್ಲ. ನಾವು ಪಾಠ ಹೇಳಿಕೊಟ್ಟ ವಿದ್ಯಾರ್ಥಿ ಯೋರ್ವ ಇಡೀ ರಾಜ್ಯದ ಗಮನ ಸೆಳೆಯುವ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಬಿ.ಎಸ್.ರಂಜನ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಗಣಿತ ವಿಷಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯಿರಲಿ ಸುಲಭವಾಗಿ ಬಿಡಿಸುತ್ತಿದ್ದ. ಇತರ ವಿದ್ಯಾರ್ಥಿಗಳಿಗಿಂತ ಮುಂಚಿತವಾಗಿ ಉತ್ತರಿಸುತ್ತಿದ್ದ.
-ಎನ್.ಎಸ್.ಶ್ರೀಕಾಂತ್, ಗಣಿತ ಶಿಕ್ಷಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News