×
Ad

ತರಾತುರಿಯಲ್ಲಿ ಗುತ್ತಿಗೆ ನೀಡುವುದು ಕಾನೂನುಬಾಹಿರ: ಶ್ರೀನಿವಾಸ್

Update: 2016-05-17 22:39 IST

ಸಾಗರ, ಮೇ 17: ನಿಯಮಾವಳಿ ಪ್ರಕಾರ ಟೆಂಡರ್ ಕರೆಯದೆ ತುಂಡು ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘ ನನ್ನನ್ನು ಸೇರಿದಂತೆ ಕೆಲವು ಸದಸ್ಯರಿಗೆ ಪತ್ರ ಬರೆದಿದೆ. ಈ ಟೆಂಡರ್ ಸೇರಿದಂತೆ ಹಲವು ಟೆಂಡರ್ ಪದ್ಧ್ದತಿಗಳು ಚಾಲ್ತಿಯಲ್ಲಿದ್ದು, ಈ ರೀತಿ ತರಾತುರಿಯಲ್ಲಿ ಗುತ್ತಿಗೆ ನೀಡುವುದು ಕಾನೂನುಬಾಹಿರವಾಗುತ್ತದೆ ಎಂದು ನಗರಸಭೆ ಹಿರಿಯ ಸದಸ್ಯ ತೀ.ನ.ಶ್ರೀನಿವಾಸ್ ತಿಳಿಸಿದ್ದಾರೆ.

ಮಂಗಳವಾರ ನಡೆದ ನಗರಸಭೆ ವಿಶೇಷ ಸಾಮಾನ್ಯಸಭೆಯಲ್ಲಿ ವಿವಿಧ ಕಾಮಗಾರಿಗೆ ಟೆಂಡರ್ ಕರೆಯುವ ವಿಷಯದ ಚರ್ಚೆಯ ಮೇಲೆ ಮಾತನಾಡಿದ ಅವರು, ತುರ್ತು ಕಾಮಗಾರಿ ಹೊರತುಪಡಿಸಿ ಬೇರೆ ಕಾಮಗಾರಿಗಳಿಗೆ ತುಂಡು ಗುತ್ತಿಗೆ ಕೊಡಲು ಅವಕಾಶವಿಲ್ಲ. ಇಷ್ಟಕ್ಕೂ ಮೀರಿ ಗುತ್ತಿಗೆ ನೀಡಿದ್ದರೆ ಅದಕ್ಕ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ತಿಳಿಸಿದರು. ವಿಪಕ್ಷ ನಾಯಕ ಸಂತೋಷ್ ಆರ್.ಶೇಟ್ ವಿಷಯ ಕುರಿತು ಮಾತನಾಡಿ, ಟೆಂಡರ್ ಹೊರತು ಪಡಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಕಾನೂನುಬಾಹಿರ. ನಗರವ್ಯಾಪ್ತಿಯಲ್ಲಿ ಅನೇಕ ತುರ್ತು ಕಾಮಗಾರಿಗಳು ನಡೆಯಬೇಕಾಗಿದೆ. ಅದರ ಕಡೆ ಆಡಳಿತ ಹೆಚ್ಚು ಗಮನ ಕೊಡುತ್ತಿಲ್ಲ ಎಂದು ದೂರಿದರು. ಬಿಜೆಪಿ ಸದಸ್ಯ ಶ್ರೀನಿವಾಸ್ ಮೇಸ್ತ್ರಿ ಮಾತನಾಡಿ, ನಗರಸಭೆಯಲ್ಲಿ ಅನೇಕ ಕಾಮಗಾರಿಗಳನ್ನು ತುರ್ತು ಆದ್ಯತೆ ಎಂಬ ಹಣೆಪಟ್ಟಿಯಡಿ ನಿರ್ವಹಿಸಲಾಗುತ್ತದೆ. ಆದರೆ ನಮ್ಮ ವಾರ್ಡ್‌ನಲ್ಲಿ ಎರಡು ತಿಂಗಳ ಹಿಂದೆ ರಸ್ತೆ ಹಾಳಾಗಿದ್ದು, ನಗರಸಭೆಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ರಿಪೇರಿ ಕಾರ್ಯ ನಡೆಸಿಲ್ಲ. ವಿದ್ಯುತ್ ಸೌಲಭ್ಯವಿಲ್ಲದೆ ಸುಮಾರು 200 ಮನೆಗಳಿಗೆ ಪೈಪ್‌ಲೈನ್ ಅಳವಡಿಸಿದ್ದರೂ ನೀರಿನ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ವಾರ್ಡ್ ಜನರ ಬಳಿ ಮಾತು ಕೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಆಳಿತದ ಪಕ್ಷದ ಸದಸ್ಯ ಜಿ.ಕೆ.ಭೈರಪ್ಪ ಮಾತನಾಡಿ, ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಾಕಷ್ಟು ಸಮಸ್ಯೆಯಿದೆ. ಸಮಸ್ಯೆ ಕುರಿತು ಹತ್ತಾರು ಬಾರಿ ಹೇಳಿದರೂ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ವಾರ್ಡ್‌ನಲ್ಲಿ ತಿರುಗಲು ನಾಚಿಕೆ ಉಂಟಾಗುತ್ತಿದೆ. ನಮ್ಮ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ಈ ಹುದ್ದೆ ಏಕೆ ಎನಿಸುತ್ತದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷ ಆರ್.ಗಣಾಧೀಶ್ ಮಾತನಾಡಿ, ತುರ್ತು ಕಾಮಗಾರಿಗಳನ್ನು ಮಾತ್ರ ಟೆಂಡರ್ ಕರೆಯದೆ ತೆಗೆದುಕೊಳ್ಳಲಾಗುತ್ತಿದೆ. ನೀರಿನ ಸಮರ್ಪಕ ಸೇವೆ ಕುರಿತು ಅಗತ್ಯಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಗಮನ ಹರಿಸಲಾಗಿದೆ ಎಂದು ತಿಳಿಸಿದರು.

ನಗರಸಭೆ ಸಾಲದಲ್ಲಿದೆ. ಜಮಾಕ್ಕಿಂತ ಖರ್ಚು ಹೆಚ್ಚಿದ್ದು, ಸಂಬಳ ಕೊಡಲು ಸಹ ಸಮಸ್ಯೆ ಉಂಟಾಗುವ ಸ್ಥಿತಿ ಇದೆ. ಕಂದಾಯ, ನಳ ಕಂದಾಯವನ್ನು ಸರಿಯಾಗಿ ವಸೂಲಿ ಮಾಡಿ. ಹೇಗಾದರೂ ಮಾಡಿ ಸಾಲಗಾರ ನಗರಸಭೆಯೆಂಬ ಹಣೆಪಟ್ಟಿಯಿಂದ ಹೊರತರುವ ಪ್ರಯತ್ನ ಮಾಡಿ ಎಂದು ಸದಸ್ಯ ತೀ.ನ.ಶ್ರೀನಿವಾಸ್ ಒತ್ತಾಯಿಸಿದರು. ವಿಪಕ್ಷ ನಾಯಕ ಸಂತೋಷ್ ಶೇಟ್ ಮಾತನಾಡಿ, ಹಿಂದೆ ನಗರಸಭೆ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿತ್ತು. ಜಮೀನಿಗೆ ಸಂಬಂಧಪಟ್ಟ ಸಾಲ ತೀರಿಸದೆ ಇರುವುದರಿಂದ ಕೋರ್ಟ್‌ನಿಂದ ಆಸ್ತಿ ಮುಟ್ಟುಗೋಲು ಆದೇಶ ಸಹ ಜಾರಿಯಾಗಿತ್ತು. ಈಗ ನಗರಸಭೆ ಸ್ಥಿತಿ ಸಾಕಷ್ಟು ಸುಧಾರಿಸಿದೆ. ಹಾಲಿ ಪೌರಾಯುಕ್ತರು ಕರವಸೂಲಿಯನ್ನು ಕಟ್ಟುನಿಟ್ಟಾಗಿ ಮಾಡುತ್ತಿದ್ದಾರೆ. ಅದನ್ನು ಇನ್ನಷ್ಟು ಬಿಗಿಗೊಳಿಸಿದರೆ ಉತ್ತಮ. ನಗರಸಭೆಯ ಆಡಿಟ್ ವರದಿ ಬಗ್ಗೆ ಲೋಪವಿದೆ ಎಂದು ಲೆಕ್ಕ ಪರಿಶೋಧಕರು ತಿಳಿಸಿದ್ದಾರೆ. ಆಡಿಟ್ ಪ್ರತಿ ಕೇಳಿದರೆ ನಗರಸಭೆ ಅಧಿಕಾರಿಗಳು ನೀಡುತ್ತಿಲ್ಲ ಎಂದು ಆರೋಪಿಸಿದರು.

ಕಟ್ಟಡ ನಿರ್ಮಾಣ ಪರವಾನಿಗೆ ಕೊಡುವ ಕುರಿತು ಸದಸ್ಯರಾದ ಉಷಾ, ಉಮೇಶ್ ಮಾತನಾಡಿದರು. ಗುತ್ತಿಗೆ ಕಾರ್ಮಿಕರಿಗೆ ವೇತನ ಹೆಚ್ಚಿಸುವ ಕುರಿತು ಶ್ರೀನಾಥ್, ಡಿಶ್ ಗುರು ಇನ್ನಿತರರು ಮಾತನಾಡಿದರು. ಸಭೆಯಲ್ಲಿ ಸೋಮವಾರ ನಿಧನರಾದ ಡಾ. ಗುರುರಾವ್ ಬಾಪಟ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News