ಶಿವಮೊಗ್ಗ: ಜಡಿಮಳೆಗೆ ತಗ್ಗು ಪ್ರದೇಶ ಜಲಾವೃತ
ಶಿವಮೊಗ್ಗ, ಮೇ 17: ಶಿವಮೊಗ್ಗ ನಗರದಲ್ಲಿ ಸೋಮವಾರ ಸಂಜೆ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ಇದರಿಂದ ನಗರದ ಹಲವು ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ನಾಗರಿಕರು ತೀವ್ರ ತೊಂದರೆ ಎದುರಿಸುವಂತಾಯಿತು. ಜಿಲ್ಲಾ ಕಾಂಗ್ರೆಸ್ ಕಚೇರಿ ಇರುವ ಪಿಎಲ್‌ಡಿ ಬ್ಯಾಂಕ್ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ಈ ರಸ್ತೆಯಲ್ಲಿ ಹಾದು ಹೋಗಿರುವ ರಾಜಕಾಲುವೆ ಉಕ್ಕಿ ಹರಿದ ಪರಿಣಾಮ ಸುತ್ತಮುತ್ತಲಿನ ಅಂಗಡಿ ಹಾಗೂ ಮನೆಗಳಿಗೆ ಕೊಳಚೆ ನೀರು ನುಗ್ಗಿತ್ತು. ಮುಖ್ಯ ರಸ್ತೆಯಲ್ಲಿ ಎರಡು ಅಡಿಗಳಷ್ಟು ನೀರು ಹರಿದು ಹೋಗುತ್ತಿದ್ದ ಕಾರಣ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪಿಎಲ್‌ಡಿ ಬ್ಯಾಂಕ್ ಸಮೀಪ ರಾಜ ಕಾಲುವೆಯು ಕಿರಿದಾಗಿದೆ. ಮತ್ತೊಂದು ಬದಿಯಲ್ಲಿ ಚರಂಡಿ ಮುಚ್ಚಿ ಹೋಗಿದೆ. ಇದರಿಂದ ಧಾರಾಕಾರವಾಗಿ ಮಳೆಯಾದ ಸಮಯದಲ್ಲಿ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ರಸ್ತೆ ಮೇಲೆ ಹರಿಯುತ್ತಿದೆ. ಅಂಗಡಿ, ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಸೋಮವಾರ ಸಂಜೆ ಬಿದ್ದ ಭಾರೀ ಮಳೆಯಿಂದ ಅನೇಕ ಅಂಗಡಿಗಳು, ಮನೆಗಳಿಗೆ ಕೊಳಚೆ ನೀರು ನುಗ್ಗಿತ್ತು. ಮನೆಮಂದಿಯೆಲ್ಲಾ ಸೇರಿಕೊಂಡು ರಾತ್ರಿಯಿಡಿ ಮಳೆ ನೀರು ಹೊರಹಾಕಿದರು. ಕೊಳಚೆ ನೀರು ನುಗ್ಗಿದ ಕಾರಣದಿಂದ ಮನೆ, ಅಂಗಡಿಗಳಲ್ಲಿ ದುರ್ನಾತ ಬರುತ್ತಿೆ. ಆದಷ್ಟು ಶೀಘ್ರವಾಗಿ ಮಹಾನಗರ ಪಾಲಿಕೆ ಆಡಳಿತ ರಾಜ ಕಾಲುವೆಯಲ್ಲಿ ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸ್ಪಂದನೆ:
ಅಂಗಡಿ, ಮನೆಗಳಿಗೆ ನೀರು ನುಗ್ಗಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಕಾರ್ಪೊರೇಟರ್, ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಲ್ ಗೋಪಿಯವರು ರಾತ್ರಿಯೇ ಸ್ಥಳಕ್ಕೆ ಆಗಮಿಸಿ ಪಾಲಿಕೆಯ ಜೆಸಿಬಿ ಮೂಲಕ ರಾಜಕಾಲುವೆಯಲ್ಲಿ ತುಂಬಿದ್ದ ಕಸಕಡ್ಡಿ ತೆರವುಗೊಳಿಸಿದರು. ಮತ್ತೊಂದು ಬದಿಯಲ್ಲಿ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ಚರಂಡಿಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿಸಿದರು. ಶಾಸಕರಿಂದ ನೆರವಿನ ಭರವಸೆ :
ಪಿಎಲ್‌ಡಿ ಬ್ಯಾಂಕ್ ರಸ್ತೆಯಲ್ಲಿರುವ ರಾಜಕಾಲುವೆಯು ಕೆಲವೆಡೆ ಅವೈಜ್ಞಾನಿಕ ವಾಗಿದೆ. ಇದರಿಂದ ಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ರಾಜಕಾಲುವೆಯ ಅಭಿವೃದ್ಧಿಗೆ ಸೂಕ್ತ ಅನುದಾನ ನೀಡುವಂತೆ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ರವರಿಗೆ ಮನವಿಸಲ್ಲಿಸಲಾಗಿದೆ. ಶಾಸಕರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಆದಷ್ಟು ಶೀಘ್ರ ರಾಜಕಾಲುವೆ ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಸಲಾಗುವುದು ಎಂದು ಮಹಾನಗರ ಪಾಲಿಕೆ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಐಡಿಯಲ್ ಗೋಪಿ ತಿಳಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದ ರಸ್ತೆಯಲ್ಲಿ ಪ್ರತಿ ಮಳೆಗಾಲದ ವೇಳೆ ಸಮಸ್ಯೆ ಸೃಷ್ಟಿಯಾಗುತ್ತಿದೆ. ರಾಜಕಾಲುವೆ ಹಾಗೂ ರಸ್ತೆ ಅಭಿವೃದ್ಧಿ ಪಡಿಸಬೇಕಾಗಿದೆ. ಹಾಗೆಯೇ ಮುಚ್ಚಿ ಹೋಗಿರುವ ಚರಂಡಿಯನ್ನು ಹೊಸದಾಗಿ ನಿರ್ಮಾಣ ಮಾಡಬೇಕಾಗಿದೆ. ಈ ಕುರಿತಂತೆ ಮೇಯರ್ ಹಾಗೂ ಆಯುಕ್ತರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಲಾಗುವುದು.
<ಐಡಿಯಲ್ ಗೋಪಿ
ಕಾರ್ಪೊರೇಟರ್