×
Ad

ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಅರಿವು ನೀಡಿ: ಡಾ. ಶ್ರೀಧರ ಬಳಗಾರ

Update: 2016-05-18 22:58 IST

ಅಂಕೋಲಾ, ಮೇ 18: ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ನಮ್ಮ ನೆರಳಿನಿಂದ ಹೊರತರಬೇಕು. ಅಂದರೆ ವಿದ್ಯಾರ್ಥಿಗಳಿಗೆ ಸ್ವಾತಂತ್ರ ನೀಡಿ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಅವರಲ್ಲಿ ಅರಿವನ್ನುಂಟು ಮಾಡಬೇಕು. ಅದಕ್ಕೆ ಶೈಕ್ಷಣಿಕ ಸಂಸ್ಥೆಗಳು ಪೂರಕ ವಾತಾವರಣ ಸೃಷ್ಟಿಸಿ ವಿದ್ಯಾರ್ಥಿಗಳ ಮನಸ್ಸನ್ನು ಸ್ವತಂತ್ರಗೊಳಿಸುವ ಮೂಲಕ ಕೆಎಲ್‌ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಯಶಸ್ಸು ಪಡೆದಿದೆ ಎಂದು ಕುಮಟಾ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶ್ರೀಧರ ಬಳಗಾರ ಹೇಳಿದರು. ಅವರು ಕೆಎಲ್‌ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಪೂರ್ವ ವಿದ್ಯಾರ್ಥಿ ಸಂಘ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ, ಸಾಧಕ ಪೂರ್ವ ವಿದ್ಯಾರ್ಥಿಗಳು ಹಾಗೂ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಮಾತನಾಡಿದರು.

ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳ ಮೆದುಳಿನ ಕೈಗಾರೀಕರಣ ಮಾಡಿ ಕೈಗಾರಿಕಾ ಕೇಂದ್ರವನ್ನಾಗಿಸಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ವಿನಾಯಕ ಜಿ. ಹೆಗಡೆ ಮಾತನಾಡಿ, ಯಾವುದೇ ವಿದ್ಯಾರ್ಥಿಯ ಸಾಧನೆಯ ಹಿಂದೆ ತಂದೆ, ತಾಯಿ, ಗುರುಗಳು, ಸ್ನೇಹಿತರು ಹಾಗೂ ಶಿಕ್ಷಣ ಸಂಸ್ಥೆ ಇರುವುದರಿಂದ ಅದರ ಶ್ರೇಯೋಭಿವೃದ್ಧಿಯಲ್ಲಿ ರಾಯಭಾರಿಗಳಂತೆ ಕೊಡುಗೆ ನೀಡಬೇಕೆಂದು ಕರೆ ನೀಡಿದರು.

ಪೂರ್ವ ವಿದ್ಯಾರ್ಥಿಗಳಾದ ಗೋಪಾಲಕೃಷ್ಣ ನಾಯಕ ಮತ್ತು ಸಂದೀಪ್ ಬಂಟ ಹಾಗೂ ಕ.ವಿ.ವಿ.ಗೆ 6ನೆ ರ್ಯಾಂಕ್ ವಿಜೇತ ವಿದ್ಯಾರ್ಥಿನಿ ಸುವರ್ಣಾ ಗೌಡ ಸನ್ಮಾನ ಸ್ವೀಕರಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ದಿವ್ಯಾ ಭಟ್ ಸಂಗಡಿಗರು ಪ್ರಾರ್ಥಿಸಿದರು. ಪೂರ್ವ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ ಭೀ. ಇಟಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಸುಬ್ರಹ್ಮಣ್ಯ ಕೆ. ಭಟ್ ಪರಿಚಯಿಸಿದರು. ಪುಷ್ಪಾ ನಾಯ್ಕ ನಿರೂಪಿಸಿದರು. ರಾಘವೇಂದ್ರ ಪಿ. ಅಂಕೋಲೆಕರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News