ಕಾರವಾರ ತಾಲೂಕು ಜಿಲ್ಲೆಗೆ ಪ್ರಥಮ
ಕಾರವಾರ, ಮೇ 18: ಪ್ರಸಕ್ತ ವರ್ಷದ ಮಾರ್ಚ್, ಎಪ್ರಿಲ್ ತಿಂಗಳಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಕಾರವಾರ ಶೈಕ್ಷಣಿಕ ಜಿಲ್ಲೆ ರಾಜ್ಯದಲ್ಲಿ ಶೇ. 87.83 ಪ್ರತಿ ಶತದೊಂದಿಗೆ, 4ನೆ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಕಾರವಾರ ತಾಲೂಕು ಶೇ. 92.46 ಪ್ರತಿಶತದೊಂದಿಗೆ ಪ್ರಥಮ, ಹೊನ್ನಾವರ ಶೇ. 90.51 ರಂತೆ ದ್ವಿತೀಯ ಸ್ಥಾನ, ಕುಮಟಾ ತಾಲೂಕು ಶೇ. 88.84 ರಂತೆ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಶೇ. 85.96 ಪ್ರತಿಶತದಷ್ಟು ಬಾಲಕರು ಉತ್ತೀರ್ಣರಾದರೆ, ಶೇ. 90.56 ಪ್ರತಿಶತ ಬಾಲಕಿಯರು ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ.
ಪ್ರತಿಶತ ಶೇ. 100ರಷ್ಟು ಸಾಧನೆ ಮಾಡಿದ ಒಟ್ಟು 33 ಶಾಲೆಗಳಾಗಿದ್ದು, ಇದರಲ್ಲಿ ಸರಕಾರಿ-11, ಅನುದಾನಿತ-09 ಮತ್ತು ಅನುದಾನ ರಹಿತ-13 ಶಾಲೆಗಳಾಗಿವೆ. ಕಾರವಾರ ಶೈಕ್ಷಣಿಕ ಜಿಲ್ಲೆಯಿಂದ ಪರೀಕ್ಷೆಗೆ ಹಾಜರಾದ ಒಟ್ಟು 10,173 ವಿದ್ಯಾರ್ಥಿಗಳ ಪೈಕಿ 4,373 ಗಂಡು ಮಕ್ಕಳು, 4,606 ಹೆಣ್ಣುಮಕ್ಕಳು ಸೇರಿ 8,979 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅದರಲ್ಲಿ ಕಾರವಾರದಲ್ಲಿ 2,057ರಲ್ಲಿ, 1,902 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಂಕೋಲಾದಲ್ಲಿ 1,379ರಲ್ಲಿ 1108 ವಿದ್ಯಾರ್ಥಿಗಳು, ಕುಮಟಾದಲ್ಲಿ 2,258ರಲ್ಲಿ 2,006 ವಿದ್ಯಾರ್ಥಿಗಳು, ಹೊನ್ನಾವರದಲ್ಲಿ 2,214ರಲ್ಲಿ 2,004 ವಿದ್ಯಾರ್ಥಿಗಳು, ಭಟ್ಕಳದಲ್ಲಿ 2,265ರಲ್ಲಿ 1,959 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಒಟ್ಟು 42 ವಿದ್ಯಾರ್ಥಿಗಳು ಪ್ರಥಮ 10 ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಕುಮಟಾದ ಸಿವಿಎಸ್‌ಕೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಎಂ. ಪ್ರಜ್ಞಾ (ಪ್ರಥಮ), ಹೊನ್ನಾವರದ ಮಾರ್ಥೊಮಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಜೆಸನ್ ಫ್ರಾನ್ಸಿಸ್ ಫೆರ್ನಾಂಡಿಸ್ (ದ್ವಿತೀಯ), ಕಾರವಾರ ಸೈಂಟ್ ಜೋಸೆಫ್ ಪ್ರೌಢ ಶಾಲೆಯ ವೈಭವ ರೇವಣಕರ, ಭಟ್ಕಳ ಆನಂದಾಶ್ರಮ ಪ್ರೌ.ಶಾಲೆಯ ಸುಮುಖಾ ನಾಯ್ಕ, ಭಟ್ಕಳ ಶ್ರೀವಲ್ಲಿ ಪ್ರೌಢ ಶಾಲೆಯ ಪ್ರವೀಣ ಈರಯ್ಯೌ ದೇವಾಡಿಗ, ಅಂಕೋಲಾದ ಜೇ.ಸಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಹಟ್ಟಿಕೇರಿಯ ಆಕಾಶ್ ಸುಭಾಷ್ ನಾಯ್ಕ, ಅಂಕೋಲಾ ಪಿ.ಎಂ. ಪ್ರೌಢ ಶಾಲೆಯ ಅಜಯ್ ಅನಚಿತ ಭಟ್ ತೃತೀಯ ಸ್ಥಾನ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಉತ್ತಮ ಫಲಿತಾಂಶವನ್ನು ನೀಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ, ಸಹಕರಿಸಿದ ಪಾಲಕ-ಪೋಷಕರಿಗೆ, ಶಿಕ್ಷಕ ವೃಂದದವರಿಗೆ, ಮುಖ್ಯ ಶಿಕ್ಷಕರಿಗೆ ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.