×
Ad

ನೀರಿನ ಬರ ನೀಗಿಸಲು ಕ್ರಮ ಕೈಗೊಳ್ಳಿ: ಮಲ್ಲಿಕಾರ್ಜುನ ಹಕ್ರೆ

Update: 2016-05-18 23:06 IST

ಸಾಗರ, ಮೇ 18: ಕುಡಿಯುವ ನೀರಿನ ಸಮಸ್ಯೆ ಇರುವಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಇಂತಹ ಸಂದರ್ಭದಲ್ಲಿ ಜನರಿಗೆ ಆಡಳಿತದ ಬಗ್ಗೆ ವಿಶ್ವಾಸ ಮೂಡಿಸುವಂತಹ ಹೊಣೆಗಾರಿಕೆ ಅಧಿಕಾರಿಗಳ ಮೇಲೆ ಇದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.

 ತಾಲೂಕಿನ ಸಾಮರ್ಥ್ಯಸೌಧದಲ್ಲಿ ಬುಧವಾರ ಕರೆಯಲಾಗಿದ್ದ ಅಧಿಕಾರಿಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರನ್ನು ಪೂರೈಸುವ ಜೊತೆಗೆ ಸಮರ್ಪಕ ನಿರ್ವಹಣೆಯ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ಅನೇಕ ಕಡೆಗಳಲ್ಲಿ ಟ್ಯಾಂಕ್ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ ಮಾಡಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಕಾಮಗಾರಿ ಗುಣಮಟ್ಟ ಸರಿಯಾಗಿಲ್ಲ. ಅಧಿಕಾರಿಗಳನ್ನು ಗುತ್ತಿಗೆದಾರರು ಆಳುವಂತೆ ಆಗಬಾರದು. ಕಳಪೆ ಕಾಮಗಾರಿ ನಡೆಸುವ ಗುತ್ತಿಗೆದಾರರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ಸಾಧ್ಯವಾಗದೆ ಇದ್ದರೆ ಅಂತಹ ಪ್ರಕರಣವನ್ನು ತಮ್ಮ ಗಮನಕ್ಕೆ ತರುವಂತೆ ಸೂಚಿಸಿದರು.

ಸಾಗರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಈಗಾಗಲೇ ಸಂಬಂಧಪಟ್ಟ ಸಚಿವರಿಗೆ, ಸರಕಾರಕ್ಕೆ ಪತ್ರ ಬರೆಯಲಾಗಿದೆ. ಅದು ಶೀಘ್ರದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬರ ನಿರ್ವಹಣೆಗೆ ತಾಲೂ ಕಿಗೆ 75 ಲಕ್ಷ ರೂ. ಹಣ ಬಂದಿದ್ದು, ಅದರ ಸಮರ್ಪಕ ವಿನಿಯೋಗಕ್ಕೆ ಕ್ರಮ ಕೈಗೊಳ್ಳ ಲಾಗಿದೆ ಎಂದರು.

ಬರಪೀಡಿತ ಪ್ರದೇಶವೆಂದು ಘೋಷಣೆ ಯಾದರೆ ಸುಮಾರು 5 ಕೋಟಿ ರೂ. ಅನುದಾನ ಸಿಗುವ ನಿರೀಕ್ಷೆ ಇದೆ. ಅದರಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆ ಯಿಂದಾಗಿ ಲಕ್ಷಾಂತರ ರೂ. ಆಸ್ತಿಪಾಸ್ತಿ, ಬೆಳೆಹಾನಿಯಾಗಿದೆ. ಅಡಿಕೆ ಮರ, ಬಾಳೆ, ತೆಂಗು ಇನ್ನಿತರ ಬೆಳೆಗಳು ಗಾಳಿಮಳೆಗೆ ನಾಶವಾಗಿದೆ. 50ಕ್ಕೂ ಹೆಚ್ಚು ಮನೆಗಳು ಬಿದ್ದು ಹೋಗಿದೆ. 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿದೆ. ಅಧಿಕಾರಿಗಳು ಈಗಾಗಲೇ ನಷ್ಟದ ಪಟ್ಟಿ ತಯಾರಿಸಿದ್ದಾರೆ. ಸರಕಾರ ತಕ್ಷಣ ಹಾನಿಗೊಳಗಾದವರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

 ಸಭೆಯಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಪರಶು ರಾಮಪ್ಪ, ಕಾರ್ಯನಿರ್ವಾಹಣಾಧಿಕಾರಿ ಸಿದ್ದಲಿಂಗಯ್ಯ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News