×
Ad

ಸಚಿವ ಸಂಪುಟದ ತೀರ್ಮಾನ ಅಂಗೀಕರಿಸಲು ಆಗ್ರಹಿಸಿ ಧರಣಿ

Update: 2016-05-18 23:09 IST

ಚಿಕ್ಕಮಗಳೂರು, ಮೇ 18: ಪರಿಶಿಷ್ಟ ಗುತ್ತಿಗೆದಾರರಿಗೆ ಸರಕಾರಿ ಕಾಮಗಾರಿಗಳಲ್ಲಿ ಮೀಸಲಾತಿ ಮತ್ತು ಟೆಂಡರ್‌ನಲ್ಲಿ ಭಾಗವಹಿಸಲು ಪಾರದರ್ಶಕ ಕಾಯ್ದೆಯ ಸೂಕ್ತ ತಿದ್ದುಪಡಿ ಮತ್ತು ರಿಯಾಯಿತಿ ನೀಡಿ ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನವನ್ನು ರಾಜ್ಯಪಾಲರು ಅನುಮೋದಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಗುತ್ತಿಗೆದಾರರ ಸಂಘದ ಪದಾಧಿಕಾರಿ ಗಳು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಸರಕಾರ ಸಂವಿಧಾನದ ಸಾಮಾಜಿಕ ನ್ಯಾಯದ ವೌಲ್ಯಗಳನ್ನು ಎತ್ತಿ ಹಿಡಿದು, ತಳ ಸಮುದಾಯಗಳ ಏಳಿಗೆಗಾಗಿ ಶ್ರಮಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ರಾಜ್ಯಕ್ಕೆ ಬೇಕಾದ ಕಾನೂನು ಕಾಯ್ದೆಯನ್ನು ತರುವುದು ರಾಜ್ಯ ಸರಕಾರದ್ದಾಗಿದೆ ಎಂದು ಧರಣಿ ನಿರತರು ಹೇಳಿದ್ದಾರೆ.

ರಾಜ್ಯದ ಜನರಿಗೆ ಒಳಿತು ಮಾಡುವ ರಾಜ್ಯ ಸರಕಾರದ ಕ್ರಮವನ್ನು ರಾಜ್ಯಪಾಲರು ಅನುಮೋದಿಸುವುದು ಆವಶ್ಯಕವಾಗಿದೆ. ಅವರ ವಿಳಂಬ ನೀತಿಯಿಂದ ಸಾಮಾನ್ಯ ಜನರಿಗೆ ಅನ್ಯಾಯವಾಗುತ್ತಿದ್ದು, ದಲಿತರಿಗೆ ನ್ಯಾಯ ದೊರಕಿಸುವುದು ರಾಜ್ಯಪಾಲರ ಕರ್ತವ್ಯವೂ ಆಗಿದೆ. ರಾಜ್ಯಪಾಲರು ಅನಗತ್ಯವಾಗಿ ದಲಿತ ಸಮುದಾಯಗಳ ಜನರಿಗೆ ವಂಚನೆ ಯಾಗುವಂತೆ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಈ ವಿಷಯದಲ್ಲಿ ರಾಜ್ಯಪಾಲರು ರಾಜಕೀಯ ನಡೆಸುತ್ತಿರುವುದು ಆ ಹುದ್ದೆಗೆ ಶೋಭೆ ತರುವಂತದ್ದಲ್ಲ. ಸಂಪುಟದ ತೀರ್ಮಾನವನ್ನು ರಾಜ್ಯಪಾಲರು ತಿರಸ್ಕರಿಸಿರುವುದರಿಂದ ಪ್ರಸಕ್ತ ಸಾಲಿನ ಕಾಮಗಾರಿಗಳನ್ನು ಪಡೆಯಲು ಟೆಂಡರ್‌ನಲ್ಲಿ ಭಾಗವಹಿಸಲು ಪರಿಶಿಷ್ಟ ಜಾತಿ ವರ್ಗದ ಗುತ್ತಿಗೆದಾರರಿಗೆ ಸಾಧ್ಯವಾಗುವುದಿಲ್ಲ. ಇದರಿಂದ ಸಾಮಾಜಿಕವಾಗಿ ರಾಜ್ಯಪಾಲರು ದಲಿತರನ್ನು ವಂಚಿಸಿದಂತಾಗುತ್ತದೆ. ಆದ್ದರಿಂದ ಸರಕಾರ ಹೊರಡಿಸಿರುವ ಸುಗ್ರಿವಾಜ್ಞೆಯನ್ನು ಅಂಗೀಕಾರ ಮಾಡುವಂತೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಪ್ಪಾಜಿ ಪ್ರಕಾಶ್, ನಗರಸಭಾ ಸದಸ್ಯ ಪುಟ್ಟಸ್ವಾಮಿ, ರಾಮಚಂದ್ರ, ಡೇವಿಡ್, ಬಿಎಸ್ಪಿ ಮುಖಂಡ ರಾಧಾಕೃಷ್ಣ ಮತ್ತಿತರರು ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News