ಸಕಾಲದಲ್ಲಿ ಕಡತ ವಿಲೇವಾರಿಯಾಗದಿದ್ದಲ್ಲಿ ಅಮಾನತಿಗೆ ಶಿಫಾರಸು: ಪ್ರಮೋದ್ ಮಧ್ವರಾಜ್ ಎಚ್ಚರಿಕೆ
ಮಡಿಕೇರಿ,ಮೇ18:ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಒಂದು ವರ್ಷಕ್ಕೂ ಮೇಲ್ಪಟ್ಟು ಬಾಕಿ ಇರುವ ಕಡತಗಳನ್ನು ಆರು ತಿಂಗಳೊಳಗೆ ವಿಲೇವಾರಿ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿ ಗಳನ್ನು ಅಮಾನತು ಮಾಡುವಂತೆ ಶಿಫಾರಸು ಮಾಡ ಲಾಗುವುದು ಎಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ಅವರು ಎಚ್ಚರಿಕೆ ನೀಡಿದ್ದಾರೆ.
ನಗರದ ಕೋಟೆ ಹಳೆ ವಿಧಾನ ಸಭಾಂಗಣದಲ್ಲಿ ಬುಧವಾರ ಕಂದಾಯ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವುದಕ್ಕೂ ಮೊದಲು ಅವರು ಮಾತನಾಡಿದರು.
ಚಿತ್ರದುರ್ಗ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕರ ಭೇಟಿ ಹಾಗೂ ಪ್ರಗತಿ ಪರಿಶೀಲನೆ ಮಾಡಲಾಗಿದೆ. ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಕೆಲವು ಜಿಲ್ಲೆಗಳಲ್ಲಿ ಹತ್ತು ವರ್ಷಗಳಿಗೂ ಮೇಲ್ಪಟ್ಟು ಕಡತ ವಿಲೇವಾರಿ ಬಾಕಿ ಇದೆ. ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದರು.
ಸಾರ್ವಜನಿಕರು ಕಂದಾಯ ಇಲಾಖೆಗೆ ಹೆಚ್ಚು ಅವಲಂಬಿತರಾಗಿದ್ದಾರೆ. ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಭೂಮಿ ಹೀಗೆ ವಿವಿಧ ರೀತಿಯ ಸೇವೆಗಳು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಸಿಗುತ್ತ್ತವೆ. ಸಕಾಲ ವ್ಯಾಪ್ತಿಯಲ್ಲಿ ಶೇ.60ರಷ್ಟು ಕಡತಗಳು ಕಂದಾಯ ಇಲಾಖೆ, ಶೇ.18ರಷ್ಟು ಸಾರಿಗೆ ಇಲಾಖೆ ಹಾಗೂ ಶೇ.22ರಷ್ಟು ಇತರೆ ಇಲಾಖೆ ವ್ಯಾಪ್ತಿಯಲ್ಲಿ ಕಡತಗಳು ವಿಲೇವಾರಿಗೆ ಬಾಕಿ ಉಳಿದಿರುವುದು ಕಂಡುಬಂದಿದೆ ಎಂದರು. ಕಂದಾಯ ಇಲಾಖೆಯ ನಾಡ ಕಚೇರಿ, ತಹಶೀಲ್ದಾರ್‌ರ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಮೊದಲು ಸಾರ್ವಜನಿಕರಿಗೆ ಸ್ಪಂದಿಸುವ ಕಾರ್ಯಗಳು ನಡೆಯಬೇಕು. ಹಾಗಾದಾಗ ಮಾತ್ರ ಸರಕಾರಕ್ಕೆ ಒಳ್ಳೆಯ ಹೆಸರು ಬರಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಡತಗಳ ವಿಳಂಬ ವಿಲೇವಾರಿಯಿಂದ ಭ್ರಷ್ಟಾಚಾರಕ್ಕೆ ಅವಕಾಶವಾಗುತ್ತದೆ. ಆದ್ದರಿಂದ ಯಾವುದೇ ಕಡತಗಳಿದ್ದರೂ ಅವು ಕಾಲ ಮಿತಿಯೊಳಗೆ ವಿಲೇವಾರಿಯಾಗಬೇಕು. ಆ ನಿಟ್ಟಿನಲ್ಲಿ ಕಂದಾಯ ಇಲಾಖೆಯನ್ನು ಪುನಶ್ಚೇತನಗೊಳಿಸಲು ಕ್ರಮವಹಿಸಲಾಗುವುದು ಎಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಯಾದ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ ಅವರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ತಹಶೀಲ್ದಾರರಾದ ಕುಂಞಮ್ಮ, ಶಿವಪ್ಪ, ಮಹದೇವ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.