×
Ad

ಸಿಎಂ-ಸಚಿವರ ವಿರುದ್ಧ ಪೊಲೀಸ್ ಮಹಾಸಂಘದಿಂದ ಎಸಿಬಿಗೆ ದೂರು

Update: 2016-05-18 23:32 IST

ಬೆಂಗಳೂರು, ಮೇ 18: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ 28 ಸಚಿವರು ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪವೆಸಗಿ ತಮಗೆ ಬೇಕಾದ ಅಧಿಕಾರಿಗಳನ್ನು ನಿರ್ದಿಷ್ಟ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುವ ಅಕ್ರಮವೆಸಗಿದ್ದಾರೆ ಎಂದು ಎಸಿಬಿಗೆ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ ದೂರು ಸಲ್ಲಿಸಿದೆ.
ಈ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂ.ಗಳಷ್ಟು ಲಂಚದ ಹಣ ಕೈ ಬದಲಾಗಿರುವ ಸಾಧ್ಯತೆಯಿದ್ದು, ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಈ ಪ್ರಕರಣ ಭೇದಿಸಲು ಸಾಧ್ಯವಾಗುತ್ತದೆ ಎಂದು ಸಂಘದ ಅಧ್ಯಕ್ಷ ವಿ.ಶ್ರೀಧರ್ ದೂರಿನಲ್ಲಿ ಕೋರಿದ್ದಾರೆ.
2015ನೆ ಸಾಲು ಹಾಗೂ ನಂತರ ನಡೆದ ಪೊಲೀಸ್ ವರ್ಗಾವಣೆಗಳು ಇಲಾಖೆಯ ನಿಷ್ಪಕ್ಷಪಾತ ಮತ್ತು ವಿಶ್ವಾಸಾರ್ಹ ನಡವಳಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಪೊಲೀಸ್ ಇಲಾಖೆಯ ಆಡಳಿತದಲ್ಲಿ ಹಸ್ತಕ್ಷೇಪವೆಸಗಿ ತಮ್ಮ ಬೇಕು-ಬೇಡಗಳಿಗೆ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿರುವ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಟಿ.ಬಿ.ಜಯಚಂದ್ರ, ಸತೀಶ್ ಜಾರಕಿ ಹೊಳಿ, ಕೃಷ್ಣಭೈರೇಗೌಡ, ಖಮರುಲ್ ಇಸ್ಲಾಂ, ಎಸ್.ಆರ್.ಪಾಟೀಲ್, ಎಚ್.ಕೆ. ಪಾಟೀಲ್, ಕಿಮ್ಮನೆ ರತ್ನಾಕರ್, ದಿನೇಶ್ ಗುಂಡೂರಾವ್, ಶ್ರೀನಿವಾಸ್‌ಪ್ರಸಾದ್, ಶಾಮನೂರು ಶಿವಶಂಕರಪ್ಪ, ಪರಮೇಶ್ವರ್‌ನಾಯಕ್, ರಮಾನಾಥ ರೈ, ಕೆ.ಜೆ. ಜಾರ್ಜ್,ಆರ್.ವಿ.ದೇಶಪಾಂಡೆ, ಉಮಾಶ್ರೀ, ಯು.ಟಿ. ಖಾದರ್, ಎಚ್.ಸಿ. ಮಹದೇವಪ್ಪ, ಬಾಬೂರಾವ್ ಚಿಂಚನಸೂರ್, ಎಚ್. ಆಂಜನೇಯ, ಅಭಯಚಂದ್ರ, ಡಿ.ಕೆ.ಶಿವಕುಮಾರ್, ವಿನಯಕುಲಕರ್ಣಿ, ಶರಣಪ್ರಕಾಶ್ ಪಾಟೀಲ್, ಎಚ್.ಎಚ್.ಮಹದೇವಪ್ರಸಾದ್, ಎಂ.ಬಿ.ಪಾಟೀಲ್, ವಿನಯ ಕುಮಾರ್ ಸೊರಕೆ, ಅಂಬರೀಶ್ ಹಾಗೂ ರಾಮಲಿಂಗಾರೆಡ್ಡಿ ವಿರುದ್ಧ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News