ರಾಜಭವನ ದುರ್ಬಳಕೆಯಾದರೆ ಹೋರಾಟ ಅನಿವಾರ್ಯ: ವಿ.ಎಸ್.ಉಗ್ರಪ್ಪ
ಬೆಂಗಳೂರು, ಮೇ 18: ರಾಜ್ಯ ಸರಕಾರ ಕಳುಹಿಸಿಕೊಡುವ ಎಲ್ಲ ಕಡತಗಳನ್ನು ವಾಪಸ್ ಮಾಡುತ್ತಿರುವ ರಾಜ್ಯಪಾಲ ವಜುಭಾಯಿ ವಾಲಾ ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ರಾಜ್ಯಪಾಲರು ತಮ್ಮ ಪೂರ್ವಾಶ್ರಮ(ಬಿಜೆಪಿ)ದ ಕಾರಣಕ್ಕೆ ಈ ರೀತಿ ವರ್ತಿಸುತ್ತಿದ್ದಾರೆ. ಬಿಜೆಪಿಯವರಿಂದ ಇದೇ ರೀತಿ ರಾಜಭವನ ದುರ್ಬಳಕೆಯಾಗುತ್ತಿದ್ದರೆ ಅವರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದರು.
ಬಿಬಿಎಂಪಿ ವಿಭಜನೆ ಮಸೂದೆ, ಕೆಪಿಎಸ್ಸಿ ಅಧ್ಯಕ್ಷ, ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತ ನ್ಯಾಯಮೂರ್ತಿ ನೇಮಕ, ಎಸ್ಸಿ-ಎಸ್ಟಿ ಸಮುದಾಯದ ಗುತ್ತಿಗೆದಾರರಿಗೆ ಸರಕಾರಿ ಕಾಮಗಾರಿಗಳಲ್ಲಿ ಮೀಸಲಾತಿ, ಗ್ರಾಮೀಣ ವಿವಿ ಸ್ಥಾಪನೆ ಸಂಬಂಧ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದರು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ವಿಶ್ವವಿದ್ಯಾನಿಲಯಗಳಿಗೆ ಉಪಕುಲಪತಿಗಳ ನೇಮಕಾತಿ ಸಂಬಂಧ ಮುಖ್ಯಮಂತ್ರಿ ಮಾಡುವ ಶಿಫಾರಸ್ಸುಗಳನ್ನು ತಿರಸ್ಕರಿಸಿ ಬೇರೆಯವರನ್ನು ನೇಮಕ ಮಾಡುವುದು ಸೇರಿದಂತೆ ಎಲ್ಲ ವಿಷಯಗಳಲ್ಲೂ ರಾಜ್ಯಪಾಲರು ಸರಕಾರದ ವಿರೋಧಿ ನಡೆಯನ್ನೆ ಅನುಸರಿಸುತ್ತಿದ್ದಾರೆ ಎಂದು ಉಗ್ರಪ್ಪ ಕಿಡಿಗಾರಿದರು.
ರಾಜಭವನವನ್ನು ಗುಜರಾತ್ ಭವನ ಮಾಡಲು ಹೊರಟಿದ್ದಾರೆ. ಇವರ ಕೆಲಸ ಕಾರ್ಯಗಳಿಗಾಗಿ ಗುಜರಾತ್ ಮೂಲದ ಅಧಿಕಾರಿಗಳೆ ಬೇಕಾಗಿದೆ. ರಾಜಪಾಲರದ್ದು ಸಂವಿಧಾನದ ಅಲಂಕಾರಿಕ ಹುದ್ದೆ. ಆದರೆ, ಸಂವಿಧಾನ, ಸುಪ್ರೀಂಕೋರ್ಟ್ ಹಾಗೂ ಸಾಮಾಜಿಕ ನ್ಯಾಯದ ವಿರುದ್ಧವಾಗಿ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.