×
Ad

ಕಠಿಣ ರಸ್ತೆ ಸುರಕ್ಷತೆ ಕಾನೂನು ಜಾರಿಗೊಳಿಸಿ: ಡಾ.ಕೃಪಾ ಆಳ್ವ

Update: 2016-05-18 23:37 IST

ಬೆಂಗಳೂರು, ಮೇ 18: ಅಪಘಾತಗಳು ಸಂಭವಿಸಿದಾಗ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಹಾಗೂ ಯುವಕರು ಸಾವನ್ನಪ್ಪುತ್ತಿದ್ದು, ಈ ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕಠಿಣವಾದ ರಸ್ತೆ ಸುರಕ್ಷತಾ ಕಾನೂನುಗಳನ್ನು ಜಾರಿಗೆ ತರಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಡಾ.ಕೃಪಾ ಆಳ್ವ ಹೇಳಿದ್ದಾರೆ.
ಬುಧವಾರ ನಗರದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಚೇರಿಯಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಆಯೋಜಿಸಿದ್ದ ಮಕ್ಕಳ ಸಾವನ್ನು ಹೇಗೆ ರಕ್ಷಿಸಬಹುದು ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಅಪಘಾತಗಳಲ್ಲಿ ಹೆಚ್ಚು ಸಾವನ್ನಪ್ಪುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೆ ಸ್ಥಾನದಲ್ಲಿದ್ದು, ಇದರಲ್ಲಿ ಅಮಾಯಕ ಮಕ್ಕಳು ಹಾಗೂ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪುತ್ತಿದ್ದಾರೆ. ಈ ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕಠಿಣವಾದ ರಸ್ತೆ ಸುರಕ್ಷತಾ ಕಾನೂನುಗಳನ್ನು ಜಾರಿಗೆ ತರಬೇಕೆಂದು ಹೇಳಿದರು.
ರಾಜ್ಯ ರೆಡ್‌ಕ್ರಾಸ್ ಸೊಸೈಟಿ ಶಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಅಶೋಕ್‌ಕುಮಾರ್ ಶೆಟ್ಟಿ ಮಾತನಾಡಿ, ರಾಜ್ಯ ಸರಕಾರ ಅಪಘಾತಗಳನ್ನು ತಡೆಗಟ್ಟಲು ಹಾಗೂ ಅಪಘಾತಗಳು ಆಕಸ್ಮಿಕವಾಗಿ ಸಂಭವಿಸಿದಾಗ ಆ ರೋಗಿಗಳ ಚಿಕಿತ್ಸೆಗಾಗಿ ಹರೀಶ್ ಯೋಜನೆ, ಬೈಕ್ ಆ್ಯಂಬುಲೆನ್ಸ್, ರಾಜ್ಯ ರಸ್ತೆ ಸುರಕ್ಷಾ ನೀತಿ, ದ್ವಿಚಕ್ರ ವಾಹನದ ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯ ಸೇರಿ ಇನ್ನಿತರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅದೇ ರೀತಿಯಾಗಿ ಕೇಂದ್ರ ಸರಕಾರ ಕೂಡ ರಾಷ್ಟ್ರೀಯ ಮಟ್ಟದಲ್ಲೂ ಸಮಗ್ರ ರಸ್ತೆ ಸುರಕ್ಷತಾ ನೀತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
 ಐಪಿಎಚ್‌ನ ಅಧಿಕಾರಿ ಡಾ.ಪ್ರಗತಿ ಹೆಬ್ಬಾರ ಮಾತನಾಡಿ, ಕಳೆದ ಹತ್ತು ವರ್ಷದಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಸುಮಾರು 1 ದಶಲಕ್ಷ ಜನರು ಸಾವನ್ನಪ್ಪಿದ್ದಾರೆ. 5 ದಶಲಕ್ಷಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ಅಪಘಾತ ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆಯನ್ನು ಗಮನಿಸಿದರೆ ಇದೊಂದು ಎಚ್ಚರಿಕೆ ಗಂಟೆ ಎನಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
   ಅಲ್ಲದೆ, ಕೇಂದ್ರ ಸರಕಾರ ರಸ್ತೆ ಅಪಘಾತಗಳನ್ನು ತಡೆಗಟ್ಟುವಂತಹ ಕಾನೂನುಗಳನ್ನು ಜಾರಿಗೆ ತರಬೇಕು. ಇದರಿಂದ, ಅನೇಕ ಮುಗ್ಧ ಜೀವಗಳು ಉಳಿಯುತ್ತವೆ. ಹಾಗೂ ಸದ್ಯ ದೇಶದ ಜಿಡಿಪಿಗೆ ಈ ಅಪಘಾತಗಳಿಂದ ಶೇ.3ರಷ್ಟು ನಷ್ಟವುಂಟಾಗುತ್ತಿದೆ ಎಂದು ವಿವರಿಸಿದರು.
ಖ್ಯಾತ ಮೂಳೆರೋಗ ತಜ್ಞ ಡಾ.ಸುಭೋದ್ ಶೆಟ್ಟಿ ಮಾತನಾಡಿ, ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ವಿವಿಧ ರಾಜ್ಯಗಳ ಸಾರಿಗೆ ಸಚಿವರ ಸಭೆ ನಡೆಯಲಿದ್ದ್ದು, ಈ ಸಭೆಯಲ್ಲಿ ಕಠಿಣ ಕಾನೂನುಗಳನ್ನು ಜಾರಿಗೆ ತರುವ ಬಗ್ಗೆ ಒತ್ತು ನೀಡಬೇಕಾಗಿದೆ ಎಂದು ಹೇಳಿದರು. ಇಂತಹ ರಾಷ್ಟ್ರೀಯ ಕಾನೂನುಗಳನ್ನು ಜರೂರಾಗಿ ಜಾರಿಗೆ ತರುವ ಅಗತ್ಯವಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News