×
Ad

ಸಿಲಿಕಾನ್‌ ಸಿಟಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

Update: 2016-05-18 23:38 IST

ಬೆಂಗಳೂರು, ಮೇ 18: ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗೆ ವರುಣನ ಆಗಮನವಾಗಿದ್ದು, ಬುಧವಾರ ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.
ಜಯನಗರ, ವಸಂತನಗರ, ಕಾರ್ಪೊರೇಶನ್ ಸರ್ಕಲ್, ರಾಜಾಜಿನಗರ, ಕೆಂಪೇಗೌಡ ಬಸ್ ನಿಲ್ದಾಣ, ರಾಜರಾಜೇಶ್ವರಿನಗರ, ವಿಜಯನಗರ, ಮಡಿವಾಳ, ಶಿವಾಜಿನಗರ, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಹೆಚ್ಚು ಮಳೆಯಾಗಿದೆ. ಮಳೆಯಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣ, ಲ್ಯಾವೆಲ್ಲೆ ರಸ್ತೆ, ಕಾರ್ಪೊರೇಶನ್ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಕೆಂಪೇಗೌಡ ಬಸ್ ನಿಲ್ದಾಣದ ಸುತ್ತಮುತ್ತ, ಟಿನ್ ಫ್ಯಾಕ್ಟರಿ ಸೇರಿದಂತೆ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಇದರಿಂದ ವಾಹನ ಸವಾರರು ತಡವಾಗಿ ಮನೆಗಳಿಗೆ ತಲುಪುವಂತಾಯಿತು. ಜೋರು ಮಳೆಯಿಂದಾಗಿ ಚರಂಡಿ ನೀರು ರಸ್ತೆಗೆ ಬಂದಿದ್ದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಕೊಳಚೆ ನೀರನ್ನೆ ದಾಟಿಕೊಂಡು ಮನೆಗಳನ್ನು ತಲುಪಿದರು. ಮಳೆ ಹಾಗೂ ಗಾಳಿಯಿಂದಾಗಿ ನಗರದ ಹಲವೆಡೆ ಮರಗಳು ಕೆಳಕ್ಕೆ ಉರುಳಿದ್ದು, ವಾಹನ ಸವಾರರೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ನಗರದಲ್ಲಿ ದಿಢೀರ್ ಮಳೆ ಸುರಿದಿದ್ದರಿಂದ ಬೆಸ್ಕಾಂನವರು ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜನ್ನು ಬಂದ್ ಮಾಡಿದ್ದರು. ಇನ್ನೆರಡು ದಿನ ಮಳೆ:   
           ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ ಆಂಧ್ರ ಪ್ರದೇಶ ಹಾಗೂ ರಾಜ್ಯದ ಈಶಾನ್ಯ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸುಂದರ್ ಮೇತ್ರಿ ತಿಳಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಂದರ್ ಮೇತ್ರಿ, ಬೆಂಗಳೂರಿನಲ್ಲಿ ಎರಡು ದಿನಗಳಿಂದ ಮೋಡಕವಿದ ವಾತಾವರಣವಿದ್ದು, ತುಂತುರು ಮಳೆಯಾಗುತ್ತಿದೆ. ಇದು ಮುಂದಿನ ಎರಡು ದಿನಗಳ ಕಾಲ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಕರ್ನಾಟಕದ ಒಳನಾಡು,ಉತ್ತರಭಾಗದಲ್ಲೂ ಸಹ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಈಶಾನ್ಯ ಭಾಗಗಳಲ್ಲಿ ಚಂಡಮಾರುತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News