ಮೇ 27ರಂದು ಬೆಂಗಳೂರಿನಲ್ಲಿ ಸಮಾವೇಶ
ಶಿವಮೊಗ್ಗ, ಮೇ 19: ರಾಜ್ಯ ಹಾಗೂ ಕೇಂದ್ರ ಸರಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಮೇ 27ರಂದು ಬೆಳಗ್ಗೆ 11:30 ಕ್ಕೆ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾವೇಶದಲ್ಲಿ ರೈತರ ಆತ್ಮಹತ್ಯೆ ತಡೆಯುವಲ್ಲಿ ಸರಕಾರ ವಿಫಲವಾಗಿರುವುದು, ಬರಪರಿಹಾರದಲ್ಲಿ ಎಡವಿರುವುದು, ನೀರಾವರಿ ಯೋಜನೆಗಳು ಜಾರಿಯಾಗದಿರುವುದು, ರೈತರ ಸಾಲ ಮನ್ನಾ ಮಾಡುವುದು, ಉದ್ಯೋಗ ಖಾತ್ರಿ ಯೋಜನೆಯನ್ನು ರೈತರ ಕುಟುಂಬಕ್ಕೆ ನೀಡುವುದು, ಬೆಳೆಗಳಿಗೆ ಪರಿಷ್ಕೃತ ಬೆಲೆ ನಿಗದಿ ಮಾಡುವುದು, ಕಬ್ಬಿನ ಬಾಕಿ ಕೂಡಲೇ ಬಿಡುಗಡೆಗೊಳಿಸುವುದು, ಸುಧಾರಿತ ಕೃಷಿ ನೀತಿ ಜಾರಿಗೊಳಿಸುವುದರ ಬಗ್ಗೆ ಸರಕಾರಗಳನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ. ಮಾರ್ಗಸೂಚಿ ಬದಲಾಯಿಸಲಿ:
ಬರಗಾಲ ಘೋಷಣೆಗೆ ಈಗಿರುವ ಮಾರ್ಗಸೂಚಿಯನ್ನು ಬದಲಿಸಬೇಕು. ಜಿಲ್ಲೆ ಮತ್ತು ರಾಜ್ಯದಲ್ಲಿ ಇನ್ನೂ ಹಲವು ತಾಲೂಕುಗಳು ಬರದ ದವಡೆಗೆ ಸಿಲುಕಿದ್ದು, ಅವುಗಳನ್ನು ಬರಗಾಲಪೀಡಿತ ತಾಲೂಕು ಎಂದು ಘೋಷಿಸಲು ಒತ್ತಾಯಿಸಿದರು. ಬರಗಾಲ ಪ್ರದೇಶದ ರೈತರಿಗೆ ನೀಡುವ ಪರಿಹಾರದ ಮಾರ್ಗಸೂಚಿಯೂ ಬದಲಾಗಬೇಕಿದೆ. ಎಷ್ಟೇ ಬೆಳೆ ನಷ್ಟವಾದರೂ ಒಂದು ಹೆಕ್ಟೇರ್‌ವರೆಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಇದನ್ನು ಬಿಟ್ಟು ಪೂರ್ಣ ಜಮೀನಿನ ಬೆಳೆಗೆ ಪರಿಹಾರ ಕೊಡುವಂತಾಗಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಸೊರಬ ತಾಲೂಕೊಂದರಲ್ಲೇ 12,900 ಹೆಕ್ಟೇರ್ ಬೆಳೆ ನಷ್ಟವಾಗಿದೆ. 878 ಲಕ್ಷ ರೂ. ಬೆಳೆ ನಷ್ಟದ ಪರಿಹಾರ ಹಣ ಬಿಡುಗಡೆಯಾಗಬೇಕಿತ್ತು. ಆದರೆ 184 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. 6,245 ಜನರಿಗೆ ಶೇ. 68ರಷ್ಟು ಹಣ ಕೊಟ್ಟಿದ್ದಾರೆ. ರಾಜ್ಯ ಮತ್ತು ಕೇಂದ್ರದ ಅಧಿಕಾರಿಗಳು ಮತ್ತು ಸಚಿವರು ಬರಗಾಲಪೀಡಿತ ಪ್ರದೇಶಗಳ ಪ್ರವಾಸ ಮಾಡಿದರೆ ವಿನಾ ಹಣ ಬಿಡುಗಡೆ ಮಾಡಿಸಲು ಯಾರೂ ಮುಂದಾಗಿಲ್ಲ. ಒಬ್ಬರ ಮೇಲೆ ಒಬ್ಬರು ಆರೋಪ ಹೊರಿಸುತ್ತ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಡಾ. ಬಿ.ಎಂ.ಚಿಕ್ಕಸ್ವಾಮಿ, ರಾಜ್ಯ ಕಾರ್ಯದರ್ಶಿ ಹಿಟ್ಟೂರು ರಾಜು, ಕೆ.ರಾಘವೇಂದ್ರ, ಹಸಿರುಸೇನೆಯ ಜಿಲ್ಲಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಪದಾಧಿಕಾರಿಗಳಾದ ಎಸ್.ಶಿವಮೂರ್ತಿ, ಇ.ಬಿ.ಜಗದೀಶ, ಡಿ.ಎಚ್.ರಾಮಚಂದ್ರಪ್ಪ, ಜಿ.ಎನ್.ಪಂಚಾಕ್ಷರಿ ಉಪಸ್ಥಿತರಿದ್ದರು.