ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಕಾರವಾರ, ಮೇ 19: ಮಕ್ಕಳ ಸೇವೆಯಲ್ಲಿ ನಿರತರಾದ ವ್ಯಕ್ತಿಗಳಿಗೆ ನೀಡುವ ರಾಜೀವ ಗಾಂಧಿ ಮಾನವ ಸೇವಾ ಪ್ರಶಸ್ತಿ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ನೀಡುವ ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಭಾರತ ಸರಕಾರವು ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ 10 ವರ್ಷಕ್ಕಿಂತ ಹೆಚ್ಚಿನ ಸೇವೆಯನ್ನು ಸಲ್ಲಿಸಿ ರುವಂತಹ ವ್ಯಕ್ತಿಗಳನ್ನು ಗುರುತಿಸಿ ರಾಜೀವ್‌ಗಾಂಧಿ ಮಾನವಸೇವಾ ಪ್ರಶಸ್ತಿಯನ್ನು 3 ವ್ಯಕ್ತಿಗಳಿಗೆ ನೀಡಿ ಗೌರವಿಸುತ್ತದೆ. ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಹಲವು ವರ್ಷ ಅಸಾಧಾರಣ ಸೇವೆ ಸಲ್ಲಿಸಿದ 3 ವ್ಯಕ್ತಿ ಹಾಗೂ 5 ಸಂಸ್ಥೆಗಳ ಸೇವೆಯನ್ನು ಗುರುತಿಸಿ ರಾಷ್ಟ್ರ ಪ್ರಶಸ್ತಿಯನ್ನು ಸಹ ನೀಡುತ್ತದೆ. ವ್ಯಕ್ತಿಗೆ ನೀಡುವ ಪ್ರಶಸ್ತಿಯು 1 ಲಕ್ಷ ರೂ. ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗೆ ನೀಡುವ ಪ್ರಶಸ್ತಿಯು 3 ಲಕ್ಷ ರೂ. ಪುರಸ್ಕಾರ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
ಅರ್ಜಿ ಸಲ್ಲಿಸಬಯಸುವ ವ್ಯಕ್ತಿ ಹಾಗೂ ಸಂಸ್ಥೆಯವರು ಆಂಗ್ಲ ಭಾಷೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ದ್ವಿ-ಪ್ರತಿಯಲ್ಲಿ ಮೇ 25ರೊಳಗಡೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರವಾರ ಇವರಿಗೆ ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ನಿಗದಿತ ಅರ್ಜಿ ನಮೂನೆಗಾಗಿ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಥವಾ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರವಾರ ಇವರನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.