ಜಮಾಅತೆ ಇಸ್ಲಾಮಿ ಹಿಂದ್‌ನಿಂದ ಕುಡಿಯುವ ನೀರು ವಿತರಣೆ
ಭಟ್ಕಳ, ಮೇ 19: ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ದಿನವೊಂದಕ್ಕೆ 12,000 ಲೀ.ನಂತೆ ಒಟ್ಟು 15 ದಿನಗಳ ವರೆಗೆ ಸುಮಾರು 1,80,000 ಲೀ. ಶುದ್ಧ್ದಕುಡಿಯುವ ನೀರು ವಿತರಿಸಿದ್ದಾಗಿ ಅಧ್ಯಕ್ಷ ಮುಜಾಹಿದ್ ಮುಸ್ತಫಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಮೇ 6ರಿಂದ ಆರಂಭಗೊಂಡಿರುವ ಕುಡಿಯುವ ನೀರು ವಿತರಣೆ ಕಾರ್ಯಕ್ರಮವು ಗುರುವಾರ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಶಿರಾಲಿಯ ಕೋಟೆಬಾಗಿಲಿನಲ್ಲಿ ಟ್ಯಾಂಕರ್ ಮೂಲಕ ನೀರು ವಿತರಿಸಿ ಮಾಧ್ಯಮಗಳಿಗೆ ಮಾಹಿತಿ ಒದಗಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕವು ಈ ಬಾರಿ ರಾಜ್ಯಾದ್ಯಂತ ಪ್ರತೀ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ನೀರಿನ ಬವಣೆೆ ಎದುರಿಸುತ್ತಿರುವ ಗ್ರಾಮಗಳನ್ನು ಸರ್ವೇ ಮಾಡಿದ್ದು, ಇಲ್ಲಿಯೂ ಕೂಡ ಶಿರಾಲಿ ಭಾಗದ ಗುಡಿಹಿತ್ತಲು, ಪಳ್ಳಿಹಕ್ಕಲ್, ಕೋಟೆಬಾಗಿಲು ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವವನ್ನು ಮನಗಂಡು ಈ ಭಾಗದಲ್ಲಿ ಸುಮಾರು 15 ದಿನಗಳವರೆಗೆ ನೀರು ಸರಬರಾಜು ಮಾಡಲಾಗಿದೆ. ಒಟ್ಟು 250ಕ್ಕೂ ಹೆಚ್ಚು ಕುಟುಂಬಗಳು ಇದರಿಂದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಉತ್ತರಕನ್ನಡ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ, ಸಲಾಹುದ್ದೀನ್‌ಎಸ್.ಕೆ., ಶಿರಾಲಿ ಪಂಚಾಯತ್ ಮಾಜಿ ಸದಸ್ಯ ಮುಹಮ್ಮದ್ ನಜೀಬ್ ಮುಂತಾದವರು ಉಪಸ್ಥಿತರಿದ್ದರು.