ಪೊಲೀಸರ ಅತಿಥಿಯಾದ ನಕಲಿ ಪತ್ರಕರ್ತ
ಶಿವಮೊಗ್ಗ,ಮೇ19: ಖಾಸಗಿ ವಾಹಿನಿಯೊಂದರ ವರದಿಗಾರನೆಂದು ಹೇಳಿಕೊಂಡು ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳಿಗೆ ಯಾಮಾರಿಸಿದ್ದ ನಕಲಿ ಪತ್ರಕರ್ತನೋರ್ವ ಕೊನೆಗೂ ಪೊಲೀಸರ ಅತಿಥಿಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ತೀರ್ಥಹಳ್ಳಿ ತಾಲೂಕು ಮೂಲದ ಪ್ರಮೋದ್ ಕುಮಾರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನಷ್ಟೆ ಆತನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ. ನಕಲಿ: ಕಳೆದ ಕೆಲ ದಿನಗಳಿಂದ ಆರೋಪಿಯು ಶಿವಮೊಗ್ಗ ಹಾಗೂ ಜಿಲ್ಲೆಯ ವಿವಿಧೆಡೆ ಬಾಡಿಗೆ ಇನ್ನೋವಾ ಕಾರಿನಲ್ಲಿ ಓಡಾಡಿಕೊಂಡಿದ್ದ. ಕಾರಿನ ಗಾಜಿನ ಮೇಲೆ ಖಾಸಗಿ ನ್ಯೂಸ್ ಚಾನಲ್ ನ ಸ್ಟಿಕ್ಕರ್‌ನ ಪ್ರೆಸ್ ಬೋರ್ಡ್ ಹಾಕಿಕೊಂಡಿದ್ದ. ಸರಕಾರಿ ಕಚೇರಿ ಹಾಗೂ ರಾಜಕಾರಣಿಗಳ ಮನೆಗೆ ಎಡತಾಕುತ್ತಿದ್ದ. ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್‌ರವರನ್ನು ಭೇಟಿಯಾಗಿ ತಾನು ಬೆಂಗಳೂರಿನ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಇನ್‌ಪುಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿದ್ದ. ಆರೋಪಿಯು ತೀರ್ಥಹಳ್ಳಿ ಪೊಲೀಸ್ ಅಧಿಕಾರಿಗಳಿಗೂ ಕೂಡ ವರದಿಗಾರನೆಂದು ಹೇಳಿ ಪ್ರಭಾವ ಬೀರಲು ಮುಂದಾಗಿದ್ದ. ಈತನ ವರ್ತನೆಯ ಬಗ್ಗೆ ಅನುಮಾನಗೊಂಡ ಪೊಲೀಸರೊಬ್ಬರು ಆತ ಹೇಳಿದ್ದ ಖಾಸಗಿ ಸುದ್ದಿ ವಾಹಿನಿಯ ಸ್ಥಳೀಯ ವರದಿಗಾರನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಸ್ಥಳೀಯ ವರದಿಗಾರ ಬೆಂಗಳೂರಿನ ಕಚೇರಿಗೆ ಫೋನ್ ಮಾಡಿ ವಿಚಾರಣೆ ನಡೆಸಿದ್ದಾರೆ. ಆ ರೀತಿಯ ಯಾವುದೇ ವ್ಯಕ್ತಿ ಕಚೇರಿಯಲ್ಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು, ನಕಲಿ ಪತ್ರಕರ್ತನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಶಿವಮೊಗ್ಗ ನಗರದಲ್ಲಿ ಬಾಡಿಗೆ ಇನ್ನೋವಾ ಕಾರಿನಲ್ಲಿ ಓಡಾಡಿಕೊಂಡಿದ್ದ ನಕಲಿ ಪತ್ರಕರ್ತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಆತನ ವಂಚನಾ ವಿವರಗಳ ಬಗ್ಗೆ ಇನ್ನಷ್ಟೆ ಮಾಹಿತಿಗಳು ತಿಳಿದುಬರಬೇಕಾಗಿದೆ.
ಪ್ರೆಸ್ ಬೋರ್ಡ್ ದುರ್ಬಳಕೆ ಅವ್ಯಾಹತ ಎಚ್ಚೆತ್ತುಕೊಳ್ಳುವುದೇ ಜಿಲ್ಲಾಡಳಿತ, ಪೊಲೀಸ್ ಇಲಾಖೆ?
ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚುತ್ತಿದ್ದು, ಪ್ರೆಸ್ ಬೋರ್ಡ್ ಬರಹವಿರುವ ಬೈಕ್, ಕಾರುಗಳ ಸಂಖ್ಯೆ ಹೆಚ್ಚಾಗಿದೆ. ಪತ್ರಕರ್ತರಲ್ಲದವರು ವಾಹನಗಳ ಮೇಲೆ ಪ್ರೆಸ್ ಎಂದು ಬರೆಯಿಸಿಕೊಂಡು ಓಡಾಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಪ್ರೆಸ್ ಎಂದು ಬರೆಯಿಸಿದ್ದ ವಾಹನಗಳನ್ನು ಅಕ್ರಮ ಚಟುವಟಿಕೆಗಳಿಗೆ ಬಳಕೆ ಮಾಡಿದ್ದ ಘಟನೆಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಪ್ರೆಸ್ ಬೋರ್ಡ್ ದುರ್ಬಳಕೆ ತಡೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಪತ್ರಕರ್ತರು ಒತ್ತಾಯಿಸಿಕೊಂಡು ಬರುತ್ತಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಅಧಿಕಾರಿ ವರ್ಗ ಮಾತ್ರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಸಾಮಾನ್ಯವಾಗಿ ಪ್ರೆಸ್ ಎಂದು ಬರೆಯಿಸಿದ ಬೈಕ್ ಹಾಗೂ ಕಾರುಗಳನ್ನು ಪೊಲೀಸರು ಹಿಡಿಯಲು ಮುಂದಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಲವರು ತಮ್ಮ ವಾಹನಗಳ ಮೇಲೆ ಪ್ರೆಸ್ ಎಂದು ಬರೆಯಿಸಿಕೊಂಡು ಓಡಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲ ಕಿಡಿಗೇಡಿಗಳು ತಮ್ಮ ವಾಹನಗಳಿಗೆ ಪ್ರೆಸ್ ಎಂದು ಬರೆಯಿಸಿ ಕಾನೂನುಬಾಹಿರ ಕೃತ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ಮಾಹಿತಿಗಳಿವೆ.