×
Ad

ಸ್ವ-ಇಚ್ಛೆಯಿಂದ ಗ್ರಾಮೀಣ ಸೇವೆಗೆ ಬರುವ ವೈದ್ಯರಿಗೆ ಅವಕಾಶ: ಸಚಿವ ಯು.ಟಿ.ಖಾದರ್

Update: 2016-05-19 23:35 IST

ಬೆಂಗಳೂರು, ಮೇ 19: ವೈದ್ಯರಿಗೆ ‘ಗ್ರಾಮೀಣ ಸೇವೆ ಕಡ್ಡಾಯ’ ಕಾಯ್ದೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಸ್ವ-ಇಚ್ಛೆಯಿಂದ ಗ್ರಾಮೀಣ ಸೇವೆಗೆ ಬರುವ ಎಂಬಿಬಿಎಸ್, ಸ್ನಾತಕೋತ್ತರ ಕೋರ್ಸ್ ಪೂರೈಸಿರುವ ವೈದ್ಯರಿಗೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಅವಕಾಶ ಕಲ್ಪಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಸೇವೆ ಬರುವ ಎಂಬಿಬಿಎಸ್ ವೈದ್ಯರಿಗೆ ಮಾಸಿಕ 40 ಸಾವಿರ ರೂ., ಸ್ನಾತಕೋತ್ತರ ಪದವಿ ಪಡೆದ ತಜ್ಞ ವೈದ್ಯರಿಗೆ ಮಾಸಿಕ 43,200 ರೂ. ಮತ್ತು ಸೂಪರ್ ಸ್ಪೆಷಾಲಿಟಿ ಪದವಿ ವೈದ್ಯರಿಗೆ 46,600 ರೂ.ಗಳನ್ನು ನೀಡಲಾಗುವುದು ಎಂದು ಪ್ರಕಟಿಸಿದರು.
ಗ್ರಾಮೀಣ ಸೇವೆಗೆ ಬರುವ ವೈದ್ಯರು ಇಲ್ಲಿನ ಆನಂದರಾವ್ ವೃತ್ತದಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಆಯುಕ್ತರು, ದೂರವಾಣಿ ಸಂಖ್ಯೆ-080-2287 9336 ಅಥವಾ ಇ-ಮೇಲ್ ಞಚಿಛ್ಚಿಚ್ಟಃಜಞಜ್ಝಿ.್ಚಟಞ ಅನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ದಂಡ ದುಪ್ಪಟ್ಟು: ಗ್ರಾಮೀಣ ಸೇವೆ ಕಡ್ಡಾಯ ಕಾಯ್ದೆಗೆ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಪ್ರಸಕ್ತ 2006ರ ಕಾಯ್ದೆ ಜಾರಿಯಲ್ಲಿದೆ. ಆದರೆ, 3ವರ್ಷ ಗ್ರಾಮೀಣ ಸೇವೆ ಸಲ್ಲಿಸದ ಎಂಬಿಬಿಎಸ್ ವೈದ್ಯರಿಗೆ-10ಲಕ್ಷ ರೂ., ಸ್ನಾತಕೋತ್ತರ ಪೂರೈಸಿದ ತಜ್ಞ ವೈದ್ಯರಿಗೆ-15 ಲಕ್ಷ ರೂ. ಹಾಗೂ ಸೂಪರ್ ಸ್ಪೆಷಾಲಿಟಿ ವೈದ್ಯರಿಗೆ-25ಲಕ್ಷ ರೂ.ದಂಡ ವಿಧಿಸಲಾಗುವುದು. 2017ನೆ ಸಾಲಿನಿಂದ ಇದು ಜಾರಿಗೆ ಬರಲಿದೆ ಎಂದು ಹೇಳಿದರು.
ವೈದ್ಯರ ನೇಮಕ: ಗ್ರಾಮೀಣ ಪ್ರದೇಶದಲ್ಲಿನ ವೈದ್ಯರ ಕೊರತೆ ನಿವಾರಿಸುವ ದೃಷ್ಟಿಯಿಂದ ಗ್ರಾಮೀಣ ಸೇವೆ ಕಡ್ಡಾಯ ಕಾಯ್ದೆ ಜಾರಿಗೆ ತರಲಾಗಿತ್ತು. ಆದರೆ, ಕೋರ್ಟ್ ತಡೆಯಾಜ್ಞೆ ನೀಡಿದ್ದು, ಅದರ ತೆರವಿಗೆ ಸರಕಾರ ಎಲ್ಲ ಪ್ರಯತ್ನ ನಡೆಸಿದೆ ಎಂದು ಹೇಳಿದರು.
ಜಿಲ್ಲಾ ಕೇಂದ್ರಗಳನ್ನು ಹೊರತುಪಡಿಸಿದರೆ ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇ.50ರಷ್ಟು ವೈದ್ಯರ ಕೊರತೆಯಿದೆ. ಆ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದ ಅವರು, ತಜ್ಞ ವೈದ್ಯರ ಸೇವೆಯನ್ನು ಕರೆ ಆಧಾರದ ಮೇಲೆ ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಹೈ.ಕ.ಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುವ ತಜ್ಞ ವೈದ್ಯರಿಗೆ ಮಾಸಿಕ 1.20 ಲಕ್ಷ ರೂ.ಗಳು ಹಾಗೂ ಇತರೆ ಜಿಲ್ಲೆಗಳಲ್ಲಿ 1 ಲಕ್ಷ ರೂ.ವೇತನ ನೀಡಲಾಗುವುದು. ವೈದ್ಯಕೀಯ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಖಾಸಗಿ ವೈದ್ಯರಿಗೆ ‘ಕರೆ ಆಧಾರ’ದ ಮೇಲೆ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಗ್ರಾಮೀಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ(ನೀಟ್)ಯನ್ನು ಪ್ರಸಕ್ತ ವರ್ಷದಿಂದ ಜಾರಿ ಮಾಡದಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುವುದು. ‘ನೀಟ್’ನಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ.
- ಯು.ಟಿ.ಖಾದರ್ ಆರೋಗ್ಯ ಸಚಿವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News