×
Ad

ಶಿಕ್ಷಾ ಸಂಸ್ಥೆಗೆ ಶೇನ್ ವ್ಯಾಟ್ಸನ್ ನೆರವು

Update: 2016-05-19 23:35 IST

ಬೆಂಗಳೂರು, ಮೇ 19: ನಗರದಲ್ಲಿ ಬಡ ಮಕ್ಕಳ ಜೀವನದಲ್ಲಿ ಬದಲಾವಣೆ ತರುವ ನಿಟ್ಟಿನಲಿ ಕೆಲಸ ಮಾಡುತ್ತಿರುವ ಪಿ ಮತ್ತು ಜಿ ಶಿಕ್ಷಾ ಸಂಸ್ಥೆ ಜೊತೆ ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಶೇನ್ ವ್ಯಾಟ್ಸನ್ ಕೈ ಜೋಡಿಸಿದ್ದಾರೆ.
ಶಿಕ್ಷಾ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ. ದೇಶದಲ್ಲಿ ನೂರಾರು ಶಾಲೆಗಳನ್ನು ತೆರೆಯುವ ಮೂಲಕ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದೆ. ಇದೀಗ ಪಡೇಗಾ ಇಂಡಿಯಾ, ಬಡೇಗಾ ಇಂಡಿಯಾ ಎಂಬ ಹೆಸರಿನಲ್ಲಿ ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದೆ. ಇದಕ್ಕೆ ನಗರದ ಜನರು ಪಿ ಮತ್ತು ಜಿ ತಯಾರಿಸುವ ಉತ್ಪನ್ನಗಳನ್ನು ಹೆಚ್ಚು ಖರೀದಿ ಮಾಡುವುದರ ಮೂಲಕ ಸಹಕರಿಸಬೇಕು ಎಂದು ಅವರು ಕೋರಿದರು.
ಶೇನ್ ವ್ಯಾಟ್ಸನ್ ಮಕ್ಕಳ ಜೊತೆ ಕಾಲ ಕಳೆದು ಅವರಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿದರು. ಅಲ್ಲದೇ ಅವರ ಬಾಲ್ಯದ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡರು. ಸಮಗ್ರ ವಿಕಸನಕ್ಕಾಗಿ ಓದು ಮತ್ತು ಪಠ್ಯೇತರ ಚಟುವಟಿಕೆಗಳು ಎರಡಕ್ಕೂ ಒತ್ತು ನೀಡಬೇಕಿದೆ ಎಂದು ಕಿವಿಮಾತು ಹೇಳಿದರು. ನಂತರ ಅವರು ಮಕ್ಕಳಿಗೆ ಕೆಲವು ಕ್ರಿಕೆಟ್ ಹೊಡೆತಗಳನ್ನು ಕಲಿಸಿ ಕೊಟ್ಟರು. ಹಾಗೂ ಗಿಟಾರ್ ಮೂಲಕ ತನ್ನ ನೆಚ್ಚಿನ ಹಾಡನ್ನು ಹಾಡುವ ಮೂಲಕ ಶಿಕ್ಷಣವನ್ನು ಕಲಿಯುವ ವಿಧಾನಗಳ ಬಗ್ಗೆ ಮನವರಿಕೆ ಮಾಡಿದರು.
ರಾಜ್ಯದ ವಿವಿಧ ಕಡೆಗಳಲ್ಲಿ ಪಿ ಮತ್ತು ಜಿ ಶಿಕ್ಷಾ ಸಂಸ್ಥೆಯು ಸುಮಾರು 33 ಶಾಲೆಗಳಲ್ಲಿ 6 ಸಾವಿರ ವಿದ್ಯಾರ್ಥಿಗಳಿಗೆ ನೆರವಾಗಿದೆ. ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತಂದು ಅವರಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಇದೀಗ ಸಂಸ್ಥೆಗೆ ವಿವಿಧ ಕಡೆಗಳಿಂದ ಬೆಂಬಲ ದೊರಕಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಜನರಿಗೆ ಅವಕಾಶವನ್ನು ಕಲ್ಪಿಸುವ ಉದ್ದೇಶ ಸಂಸ್ಥೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News