‘ಎತ್ತಿನಹೊಳೆ’ ಯೋಜನೆ ಸಂಶಯ ನಿವಾರಿಸಲು ಕ್ರಮ: ಖಾದರ್
ಬೆಂಗಳೂರು, ಮೇ 19: ನೇತ್ರಾವತಿ ನದಿ ಪಾತ್ರದ ಜನತೆಯಲ್ಲಿನ ಆತಂಕಗಳನ್ನು ನಿವಾರಿಸಿ, ಎತ್ತಿನಹೊಳೆ ಯೋಜನೆ ಜಾರಿಗೆ ನಮ್ಮ ವಿರೋಧವಿಲ್ಲ ಎಂದು ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ಯು.ಟಿ.ಖಾದರ್, ಈ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಪ್ರತಿನಿಧಿಸುವ ಸದಾನಂದಗೌಡ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಎತ್ತಿನಹೊಳೆ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಆ ವೇಳೆ ಆ ಭಾಗದ ಜನರ ಸಂಶಯ ನಿವಾರಿಸಲಿಲ್ಲ. ಇದೀಗ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ದೂರಿದರು.
ಎತ್ತಿನಹೊಳೆ ಯೋಜನೆ ಈಗಾಗಲೇ ಪ್ರಗತಿಯಲ್ಲಿದ್ದು, ನೇತ್ರಾವತಿ ನದಿ ಪಾತ್ರದ ಜನತೆಯಲ್ಲಿ ಸಂಶಯಗಳನ್ನು ನಿವಾರಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಪ್ರಯತ್ನಿಸುವ ಸಂದರ್ಭದಲ್ಲೇ ಬಿಜೆಪಿ ಮುಖಂಡರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ಈ ಸಂಬಂಧ ಸಿಎಂ ಶೀಘ್ರದಲ್ಲೇ ಆ ಭಾಗದ ಜನರ ಸಭೆ ಕರೆದು ಚರ್ಚಿಸಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.