ಪ್ರತಿಭಟನೆ ಅನುಮತಿಗೆ ‘ಆಧಾರ್’ ಸಂಗ್ರಹಿಸಿ
ಗೃಹ ಇಲಾಖೆಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಮೇ 19: ರಾಜ್ಯದಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು, ಪ್ರತಿಭಟನೆಯಲ್ಲಿ ಭಾಗವಹಿಸುವವರ ಆಧಾರ್ ಕಾರ್ಡ್‌ಗಳನ್ನು ಗೃಹ ಇಲಾಖೆ ಸಂಗ್ರಹಿಸಿದ ಬಳಿಕ ಪ್ರತಿಭಟನೆಗೆ ಅವಕಾಶ ಕಲ್ಪಿಸಲು ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ರಮೇಶ್‌ಚಂದ್ರ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾಗ ಆ ಪ್ರತಿಭಟನೆಗಳಲ್ಲಿ ದುಷ್ಕರ್ಮಿಗಳು ಸೇರಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಕಲ್ಲು ತೂರಾಟ ನಡೆಸಿ ನಷ್ಟವುಂಟು ಮಾಡುತ್ತಾರೆ. ಅಲ್ಲದೆ, ಪ್ರತೀ ವರ್ಷ ಈ ಅಹಿತಕರ ಘಟನೆಗಳಿಂದ 15 ಕೋಟಿ ರೂ. ಸರಕಾರಕ್ಕೆ ಆರ್ಥಿಕ ನಷ್ಟವುಂಟಾಗುತ್ತಿದೆ. ಹೀಗಾಗಿ, ಗೃಹ ಇಲಾಖೆಗೆ ಸಂಘಟನೆಗಳು ಪ್ರತಿಭಟನೆ ನಡೆಸುತ್ತೇವೆಂದು ಅನುಮತಿ ಕೇಳಿ ಬಂದರೆ ಪ್ರತಿಭಟನೆಯಲ್ಲಿ ಭಾಗವಹಿಸುವವರ ಆಧಾರ್ ಕಾರ್ಡ್‌ಗಳನ್ನು ಸಂಗ್ರಹಿಸಿದ ಬಳಿಕ ಆ ಸಂಘಟನೆಗಳಿಗೆ ಪ್ರತಿಭಟನೆಗೆ ಅವಕಾಶ ಕಲ್ಪಿಸುವಂತೆ ಆದೇಶಿಸಬೇಕೆಂದು ಅರ್ಜಿದಾರರು ಕೋರಿದರು.