×
Ad

ಎತ್ತಿನಹೊಳೆ ಯೋಜನೆ ವಿರೋಧಿಸಿ ದ.ಕ. ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Update: 2016-05-19 23:42 IST

ಮಂಗಳೂರು, ಮೇ 19: ದ.ಕ. ಜಿಲ್ಲೆಯ ಜೀವನದಿಯಾದ ನೇತ್ರಾವತಿಗೆ ಅಪಾಯವನ್ನುಂಟು ಮಾಡುವ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ನೇತ್ರಾವತಿ ಸಂಯುಕ್ತ ರಕ್ಷಣಾ ಸಮಿತಿ ಗುರುವಾರ ನೀಡಿದ್ದ ಸ್ವಯಂಪ್ರೇರಿತ ದ.ಕ. ಜಿಲ್ಲಾ ಬಂದ್ ಕರೆಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಂದ್ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಖಾಸಗಿ ಹಾಗೂ ಸರಕಾರಿ ಬಸ್ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಎಲ್ಲೆಡೆ ಜನಸಂಚಾರ ವಿರಳವಾಗಿತ್ತು. ನಗರ ಪ್ರದೇಶಗಳಲ್ಲಿ ಹೆಚ್ಚಿನ ಅಂಗಡಿಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಗಳೂರು-ಉಡುಪಿ ನಡುವೆ ಹಾಗೂ ಮಂಗಳೂರು-ಕಾಸರಗೋಡು ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ದೂರ ಊರುಗಳಿಗೆ ತೆರಳುವ ಜನಸಾಮಾನ್ಯರು ಸಂಕಷ್ಟಕ್ಕೊಳಗಾದರು. ಸುರತ್ಕಲ್ ಬಳಿ ಹೋರಾಟಗಾರರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದರಿಂದ ಮಂಗಳೂರು-ಉಡುಪಿ ನಡುವಿನ ರಸ್ತೆ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು.

ಕೆಲವೆಡೆ ಟಯರುಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲಾಗಿದ್ದರೆ, ಬೆಳ್ತಂಗಡಿಯಲ್ಲಿ ದುಷ್ಕರ್ಮಿಗಳು ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಹೊರತುಪಡಿಸಿದರೆ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

ಜಿಲ್ಲೆಯ ಕೆಲವೆಡೆಗಳಲ್ಲಿ ಅಂಗಡಿಮುಂಗಟ್ಟುಗಳು ತೆರೆದಿದ್ದರೂ ಜನಸಂಚಾರ ವಿರಳವಾಗಿತ್ತು. ಬಸ್‌ಗಳು ರಸ್ತೆಗಿಳಿಯದ ಕಾರಣ ಕೆಲವು ಖಾಸಗಿ ಸಂಸ್ಥೆಗಳು ರಜೆ ಘೋಷಿಸಿದ್ದವು. ಸಂಜೆ 6 ಗಂಟೆಯ ಸುಮಾರಿಗೆ ಕೆಎಸ್ಸಾರ್ಟಿಸಿ ಸೇರಿದಂತೆ ಹೆಚ್ಚಿನ ಬಸ್‌ಗಳು ಸಂಚಾರ ಆರಂಭಿಸಿದವು. ಸಂಜೆಯ ವೇಳೆಗೆ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಸದಸ್ಯರು ಮಂಗಳೂರಿನಲ್ಲಿ ಪ್ರತಿಭಟನಾ ಧರಣಿ ನಡೆಸಿ ಎತ್ತಿನ ಹೊಳೆಯೋಜನೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News