ಅವನಿಂದ ಒಂದು ಕಡ್ಡಿ ಮುರಿಯಲೂ ಆಗುವುದಿಲ್ಲ, ಭಯೋತ್ಪಾದಕ ಹೇಗಾದ?: ಬಂಧಿತನ ಮಾವನ ಪ್ರಶ್ನೆ
ಭಟ್ಕಳ, ಮೇ 20: ಕಳೆದ ಆರೇಳು ವರ್ಷಗಳಿಂದ ದುಬೈಯಲ್ಲಿ ಕೆಲಸ ಮಾಡಿಕೊಂಡಿದ್ದ ಭಟ್ಕಳ ಮೂಲದ ಅಬ್ದುಲ್ ವಾಹಿದ್ ಸಿದ್ದಿಬಾಪನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ ರಾತ್ರಿ ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.
ಈ ಕುರಿತು ವರದಿಯಾದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಭಟ್ಕಳದ ಉಮರ್ ಸ್ಟ್ರೀಟ್‌ನಲ್ಲಿರುವ ಬಂಧಿತನ ಮಾವ ಕೋಲಾ ಮನ್ಸೂರ್‌ರನ್ನು ಸಂಪರ್ಕಿಸಿದಾಗ ಬಂಧನದ ಬಗ್ಗೆ ಮಾಹಿತಿ ನೀಡಿದ್ದು, ‘ಅವನಿಂದ ಒಂದು ಕಡ್ಡಿ ಮುರಿಯಲೂ ಆಗುವುದಿಲ್ಲ, ಭಯೋತ್ಪಾದಕ ಹೇಗಾದ? ಎಂದು ಪ್ರಶ್ನಿಸಿದರು.
ಭಟ್ಕಳದ ಮಗ್ದೂಮ್ ಕಾಲನಿಯ ಮಸೀದಿಯೊಂದರಲ್ಲಿ ಇಮಾಮ್ ಆಗಿ ಜೀವನ ಸಾಗಿಸುತ್ತಿದ್ದ ಅಬ್ದುಲ್ ವಾಹಿದ್, ಇಲ್ಲಿನ ಮಸೀದಿ ರಾಜಕೀಯದಲ್ಲಿ ಕಲಹ ಏರ್ಪಟ್ಟಾಗ ಭಟ್ಕಳವನ್ನು ಬಿಟ್ಟು ದುಬೈಗೆ ಉದ್ಯೋಗವನ್ನು ಅರಸಿ ಹೋಗಿದ್ದು, ಅಲ್ಲಿ ಕೆಲವು ವರ್ಷ ಕೆಲಸ ಮಾಡಿ ಭಟ್ಕಳಕ್ಕೆ ಬಂದಿದ್ದರು.
ಆದರೆ ಮಸೀದಿಯಲ್ಲಿ ಉಂಟಾದ ಕಲಹವು ವೈಯಕ್ತಿಕ ದ್ವೇಷದಿಂದ ಕೆಲವರು ಅಬ್ದುಲ್ ವಾಹಿದ್‌ನ ವಿರುದ್ಧ ಇಲ್ಲಿನ ಇಂಟಲಿಜೆನ್ಸಿ ಅಧಿಕಾರಿಯೊಬ್ಬರಿಗೆ ಸುಳ್ಳು ದೂರು ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ತನ್ನ ಮನೆ ಬಾಡಿಗೆ ಕಟ್ಟಲು, ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ನೀಡಲು, ತನ್ನ ಸ್ವಂತ ಪತ್ನಿಗೆ ಹೊಟ್ಟೆ ತುಂಬ ಊಟ ಹಾಕಲು ಗತಿಯಿಲ್ಲದವರು ಇಂಡಿಯನ್ ಮುಜಾಹಿದ್ದೀನ್‌ಗೆ ಹಣ ಕಳಿಸುತ್ತಿದ್ದ ಎಂಬ ಮಾಧ್ಯಮ ವರದಿಗಳಿಂದ ತನಗೆ ನಗು ಬರುತ್ತಿದ್ದೆ. ಆತನ ವಿರುದ್ಧ ವೈಯುಕ್ತಿಕ ದ್ವೇಷ ಸಾಧನೆಗೆ ಮಾಡಿದ ಸಣ್ಣ ತಪ್ಪಿನಿಂದಾಗಿ ಇಂದು ಒಂದು ಕುಟುಂಬ ಬೀದಿಪಾಲಾದಂತಾಗಿದೆ ಎಂದು ಹೇಳಿದರು.
ಆತನ ಪರ ಕೋರ್ಟ್ ಮೆಟ್ಟಿಲು ಹತ್ತಲೂ ನಮ್ಮಲ್ಲಿ ಹಣವಿಲ್ಲ. ಇಂತಹ ವ್ಯಕ್ತಿಗೆ ಈ ರೀತಿಯ ಸ್ಥಿತಿ ಬಂದೆರಗಿರುವುದು ನಿಜಕ್ಕೂ ಶೋಚನೀಯ ಎಂದು ಹೇಳಿ ಕಣ್ಣೊರೆಸಿಕೊಂಡ ಮನ್ಸೂರ್ ನಮಗೊದಗಿದ ಸ್ಥಿತಿ ಮತ್ತಾರಿಗೂ ಬಾರದಿರಲಿ ಎಂದರು.
ಗುರುವಾರ ರಾತ್ರಿ ಯಾರೋ ತನ್ನ ಮುಬೈಲ್‌ಗೆ ಕರೆ ಮಾಡಿ ದಿಲ್ಲಿಯಲ್ಲಿ ನಿಮ್ಮ ಅಬ್ದುಲ್ ವಾಹಿದ್‌ನ್ನು ಬಂಧಿಸಲಾಗಿದೆ ಎಂದಷ್ಟೆ ಹೇಳಿ ಕಾಲ್‌ಕಟ್ ಮಾಡಿದರು. ಆತನ ಮೇಲೆ ಯಾವು ಪ್ರಕರಣ ದಾಖಲಿಸಲಾಗಿದೆ ಎನ್ನುವುದು ತನಗೆ ತಿಳಿಯದು ಎಂದು ಮಾಧ್ಯಮದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.