ಶಿವಮೊಗ್ಗದಿಂದ ವರ್ಗಾವಣೆ ಕೋರಿದ್ದಾರಾ ಜಿಲ್ಲಾಧಿಕಾರಿ?
ಶಿವಮೊಗ್ಗ, ಮೇ. 20: ಅಪರ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್‌ರವರ ವರ್ಗಾವಣೆ ಬೆನ್ನಲ್ಲೇ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿಯವರು ಕೂಡ ವರ್ಗವಾಗಲಿದ್ದಾರೆ ಎಂಬ ಮಾತು ಅಧಿಕಾರಿಗಳ ವಲಯದಲ್ಲಿ ದಟ್ಟವಾಗಿ ಹಬ್ಬಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಸ್ವತಃ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿಯವರೇ ಶಿವಮೊಗ್ಗದಿಂದ ತಮ್ಮನ್ನು ವರ್ಗಾಯಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಇದು ಸಾಕಷ್ಟು ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ವಿ.ಪಿ. ಇಕ್ಕೇರಿಯವರ ಕೋರಿಕೆಯಂತೆ ಅವರನ್ನು ಶಿವಮೊಗ್ಗದಿಂದ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನಿರ್ಧರಿಸಿದ್ದಾರೆನ್ನಲಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ಪ್ರಭಾವಿ ಹಿರಿಯ ನಾಯಕರೊಬ್ಬರು ಮುಂದಿನ ಒಂದು ವರ್ಷದವರೆಗೆ ವಿ.ಪಿ.ಇಕ್ಕೇರಿಯವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡದಂತೆ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಜಿಲ್ಲಾಧಿಕಾರಿ ವರ್ಗಾವಣೆ ತೂಗುಯ್ಯಿಲೆಯಂತಾಗಿದೆ ಎಂದು ತಿಳಿದು ಬಂದಿದೆ. ರಾಜಕೀಯ ಒತ್ತಡ: ಶಿವಮೊಗ್ಗ ಜಿಲ್ಲೆಯು ರಾಜಕೀಯ ಪ್ರಭಾವವಿರುವ ಜಿಲ್ಲೆಯಾಗಿದೆ. ರಾಜ್ಯ ರಾಜಕಾರಣದ ಅತಿರಥ-ಮಹಾರಥ ರಾಜಕಾರಣಿಗಳು ಜಿಲ್ಲೆಯಲ್ಲಿದ್ದಾರೆ. ಸರ್ವೇಸಾಮಾನ್ಯವಾಗಿ ಪ್ರಮುಖ ಅಧಿಕಾರಿಗಳ ಮೇಲೆ ಸಾಕಷ್ಟು ರಾಜಕೀಯ ಒತ್ತಡವಿರುತ್ತದೆ. ಎಲ್ಲರಿಗೂ ತೃಪ್ತಿಯಾಗುವ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುವುದು ಹರಸಾಹಸದ ಸಂಗತಿಯಾಗಿದೆ. ಕೊಂಚ ಹೆಚ್ಚುಕಮ್ಮಿ ನಿರ್ಧಾರ ಕೈಗೊಂಡರೂ ರಾಜಕಾರಣಿಗಳ ಕೆಂಗಣ್ಣಿಗೆ ತುತ್ತಾಗಬೇಕಾಗುತ್ತದೆ. ವಿ.ಪಿ. ಇಕ್ಕೇರಿಯವರು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ
ನಿಯೋಜನೆಗೊಂಡ ನಂತರ, ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಅವರು ನಿರಂತರವಾಗಿ ರಾಜಕೀಯ ಒತ್ತಡಕ್ಕೆ ತುತ್ತಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದರಿಂದ ಬೇಸತ್ತು ಹೋಗಿರುವ ಜಿಲ್ಲಾಧಿಕಾರಿಯವರು ಶಿವಮೊಗ್ಗದಿಂದ ವರ್ಗಾವಣೆ ಕೋರಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಅಲ್ಲದೆ, ಮತ್ತೆ ಕೆಲ ಮೂಲಗಳು, ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಅವರು ವರ್ಗಾವಣೆ ಕೋರಿದ್ದಾರೆ ಎಂದು ತಿಳಿಸಿದೆ.ಈ ಎಲ್ಲ ಮಾತುಗಳನ್ನು ಅವರ ಕಚೇರಿಯ ಮೂಲ ಗಳು ಅಲ್ಲಗಳೆಯುತ್ತವೆ. ಜಿಲ್ಲಾಧಿಕಾರಿಯವರು ವರ್ಗಾವಣೆ ಕೋರಿದ್ದಾರೆ ಎಂಬ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಸತ್ಯಕ್ಕೆ ದೂರವಾದು ಎಂದು ಹೇಳುತ್ತವೆ.ಒಟ್ಟಾರೆ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿಯವರು ಶಿವಮೊಗ್ಗದಿಂದ ವರ್ಗಾವಣೆ ಕೋರಿದ್ದಾರೆ ಎಂಬ ಮಾತು ಡಿ.ಸಿ. ಕಚೇರಿಯ ಪಡಸಾಲೆಯಲ್ಲಂತೂ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿರುವುದಂತೂ ಸತ್ಯ.