×
Ad

ಸಾಗರ: ಮೆಸ್ಕಾಂ ನಿರ್ಲಕ್ಷಕ್ಕೆ ಗ್ರಾಮಸ್ಥರ ಪರದಾಟ

Update: 2016-05-20 21:57 IST

ಸಾಗರ, ಮೇ 20: ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳು ಗ್ರಾಮಸ್ಥರ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಗುರುವಾರ ರಾತ್ರಿ ಬ್ರಾಹ್ಮಣ ಮಂಚಾಲೆ, ಕಾರೆಹೊಂಡ ವಡ್ಡಕೆರೆ ಗ್ರಾಮಸ್ಥರು ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಗಾಳಿಗೆ ಮರಬಿದ್ದು ವಿದ್ಯುತ್ ತಂತಿ ತುಂಡಾಗಿತ್ತು. ಮೆಸ್ಕಾಂ ಅಧಿಕಾರಿಗಳು ತುಂಡಾಗಿ ಬಿದ್ದಿರುವ ತಂತಿಯನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿಲ್ಲ. ಇದರಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ. ನಾಲ್ಕೈದು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.

 ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಕುಡಿಯುವ ನೀರಿಗೆ ಮೂರ್ನಾಲ್ಕು ಕಿ.ಮಿ. ದೂರದಲ್ಲಿರುವ ಕೆರೆಯನ್ನು ಆಶ್ರಯಿಸ ಬೇಕಾಗಿದೆ. ಬ್ರಾಹ್ಮಣ ಮಂಚಾಲೆ, ಕಾರೆಹೊಂಡ, ವಡ್ಡಕೆರೆ, ಬೊಮ್ಮತ್ತಿ, ಪುರಲೆಮಕ್ಕಿ ವ್ಯಾಪ್ತಿಯಲ್ಲಿ ಸುಮಾರು 500 ಕುಟುಂಬಗಳಿದ್ದು, ಸಾವಿರಾರು ಜಾನುವಾರುಗಳಿವೆ. ಲೈನ್‌ಮೆನ್ ಸಿದ್ದೇಶ್ ಎಂಬವರಿಗೆ ಫೋನ್ ಮಾಡಿದರೆ ಅವರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ರಸ್ತೆಯಲ್ಲಿ ತಂತಿ ಹರಿದು ಬಿದ್ದಿದ್ದು, ಲೈನ್‌ಮೆನ್ ಸಿದ್ದೇಶ್ ವಿದ್ಯುತ್ ಕಂಬ ಮುರಿದು ಬಿದ್ದಿದೆ ಎಂದು ಮೆಸ್ಕಾಂ ಅಧಿಕಾರಿ ಗಳಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು. ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಮೆಸ್ಕಾಂ ಕಚೇರಿಗೆ ಬಂದರೆ ಅಲ್ಲಿನ ಜೂನಿಯರ್ ಇಂಜಿನಿಯರ್ ಗ್ರಾಮಸ್ಥರನ್ನು ಏಕವಚನದಲ್ಲಿ ಮಾತನಾಡಿಸುತ್ತಾ ಗ್ರಾಮಸ್ಥರನ್ನು ಅವಮಾನಿಸಿದ್ದಾರೆ ಎಂದು ಪ್ರತಿಭಟನಾ ನಿರತರು ದೂರಿದ್ದಾರೆ. ತ ಕ್ಷಣ ನಮ್ಮ ಗ್ರಾಮಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಗ್ರಾಮಸ್ಥರಿಗೆ ಸ್ಪಂದಿಸದಿರುವ ಲೈನ್‌ಮೆನ್ ಸಿದ್ದೇಶ್ ಹಾಗೂ ಗ್ರಾಮಸ್ಥರನ್ನು ಏಕವಚನದಲ್ಲಿ ಮಾತನಾಡಿ, ಗದರಿಸಿರುವ ಜೂನಿಯರ್ ಇಂಜಿನಿಯರ್ ನವೀನ್ ಕುಮಾರ್ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಪ್ರಮುಖರಾದ ಎಂ.ಜಿ. ಗುರುಪ್ರಸಾದ್, ರಘು ಪ್ರಸಾದ್, ಎಂ.ಜಿ.ನಟೇಶ್, ಎಂ.ಕೆ. ಬಾಲಚಂದ್ರ, ಗೌತಮ್, ಅಭಿಷೇಕ್, ಎನ್.ಕೆ. ಕೃಷ್ಣಮೂರ್ತಿ, ಸುಭಾಷ್ ಶೆಟ್ಟಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News