ಸೆಕ್ಯೂರಿಟಿ ಗಾರ್ಡ್‌ಗಳ ವಜಾಕ್ಕೆ ಆಕ್ರೋಶ: ಜಿಲ್ಲಾಧಿಕಾರಿಗೆ ಮನವಿ
ಶಿವಮೊಗ್ಗ, ಮೇ 20: ಬ್ಯಾಂಕ್‌ಗಳ ಎಟಿಎಂಗಳಲ್ಲಿ ಕಾವಲುಗಾರರಾಗಿ (ಸೆಕ್ಯೂರಿಟಿ) ಕೆಲಸ ಮಾಡುತ್ತಿರುವ 50 ವರ್ಷ ಮೇಲ್ಪಟ್ಟವರನ್ನು ಕೆಲಸದಿಂದ ವಜಾಗೊಳಿಸಿರುವ ಕ್ರಮವನ್ನು ಖಂಡಿಸಿ ವಜಾಗೊಂಡ ಎಟಿಎಂ ಕಾವಲುಗಾರರು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗೆ ಮನವಿ ಪತ್ರ ಅರ್ಪಿಸಿದರು. ಜಿಲ್ಲೆಯ ಎಟಿಎಂಗಳಲ್ಲಿ ಹೊರಗುತ್ತಿಗೆ ಪಡೆದ ಮ್ಯಾನ್‌ಪವರ್ ಏಜೆನ್ಸಿಗಳು ತಮ್ಮನ್ನು ಕರ್ತವ್ಯಕ್ಕೆ ನೇಮಿಸಿಕೊಂಡಿತ್ತು. ಕಳೆದ ಹಲವು ವರ್ಷಗಳಿಂದ ಹಗಲಿರುಳೆನ್ನದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡಿಕೊಂಡು ಬಂದಿದ್ದೇವೆ. ಆದರೆ ಕೆಲಸಕ್ಕೆ ತಕ್ಕಂತೆ ವೇತನ ನೀಡುತ್ತಿರಲಿಲ್ಲ. ಮಾಸಿಕ ಕೇವಲ 6-7 ಸಾವಿರ ರೂ. ಸಂಬಳ ನೀಡಲಾಗುತ್ತಿತ್ತು ಎಂದು ಮನವಿಯಲ್ಲಿ ದೂರಿದ್ದಾರೆ. ಆದರೆ ಇತ್ತೀಚಿನ ಬ್ಯಾಂಕ್ ನಿಯಮಗಳಂತೆ ಏಕಾಏಕಿ ಕೆಲಸದಿಂದ ತೆಗೆದುಹಾಕಲಾಗಿದೆ. ಈ ಉದ್ಯೋಗ ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದ ನಾವು ಮತ್ತು ನಮ್ಮ ಕುಟುಂಬ ಅತಂತ್ರವಾಗಿ ದಿಕ್ಕು ಕಾಣದೆ ಕಂಗಾಲಾಗಿಸಿದೆ. ತಾವು ಉಳಿದವರಂತೆ ಮಾನಸಿಕ ಹಾಗೂ ದೈಹಿಕವಾಗಿ ಸಮರ್ಥರಾಗಿದ್ದು, ಉತ್ತಮ ರೀತಿಯಲ್ಲಿ ಸೆಕ್ಯೂರಿಟಿ ಕೆಲಸವನ್ನು ನಿರ್ವಹಿಸಿಕೊಂಡು ಬರುತ್ತಿದ್ದೇವೆ. ಏಕಾ ಏಕಿಯ ನಿರ್ಧಾರದಿಂದ ಬೇರೆ ಯಾವ ಕಡೆಯೂ ಕೆಲಸ ಸಿಗದೆ, ಬೀದಿಪಾಲಾಗಿದ್ದೇವೆ ಎಂದು ಮನವಿ ಪತ್ರದಲ್ಲಿ ಕಾವಲುಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಂಬಂಧಿತ ಬ್ಯಾಂಕ್ ಅಧಿಕಾರಿಗಳಿಗೆ ಮತ್ತು ಏಜೆನ್ಸಿಯವರಿಗೆ ಕೂಡಲ ನಿರ್ದೇಶನ ನೀಡುವ ಮೂಲಕ ತಮ್ಮನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಸೂಚಿಸಬೇಕೆಂದು ಜಿಲ್ಲಾಡಳಿತಕ್ಕೆ ಕಾವಲುಗಾರರು ಆಗ್ರಹಿಸಿದ್ದಾರೆ.