×
Ad

ಪೌರಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ

Update: 2016-05-20 22:03 IST

ಚಿಕ್ಕಮಗಳೂರು, ಮೇ 20: ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಮೃತಪಟ್ಟ ಪೌರಕಾರ್ಮಿಕ ನರಸಿಂಹ ಕುಟುಂಬಕ್ಕೆ 10ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಗೆ ನರಸಿಂಹ ಕುಟುಂಬದ ಸದಸ್ಯರೊಂದಿಗೆ ಆಗಮಿಸಿದ ದಸಂಸ ಜಿಲ್ಲಾ ಸಂಚಾಲಕ ಕೆ.ಕುಮಾರ್ ಮಾತನಾಡಿ, ಮ್ಯಾನ್‌ಹೋಲ್, ಶೌಚಗುಂಡಿ, ಒಳಚರಂಡಿಯನ್ನು ಸ್ವಚ್ಛತೆ ಮಾಡುವ ಸಂದರ್ಭದಲ್ಲಿ ಯಾವುದೇ ಪೌರಕಾರ್ಮಿಕರು ಮೃತಪಟ್ಟರೆ ಅಂತಹ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಸಂಬಂಧ ನರಸಿಂಹ ಕುಟುಂಬಕ್ಕೆ ಪರಿಹಾರ ನೀಡಿ, ಅವರ ಮಗನಿಗೆ ಸರಕಾರಿ ಉದ್ಯೋಗ ಕಲ್ಪಿಸಬೇಕು ಎಂದರು.

ಕುಟುಂಬ ನಿರ್ವಹಣೆಗೆ ದಾರಿಯಾಗಿದ್ದ ವ್ಯಕ್ತಿ ಮೃತಪಟ್ಟಿರುವುದರಿಂದ ಕುಟುಂಬದ ಸದಸ್ಯರು ತೊಂದರೆಯಲ್ಲಿ ಸಿಲುಕಿದ್ದು, ಕೂಡಲೆ ಅಧಿಕಾರಿಗಳು ಗಮನ ಹರಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಬೇಡಿಕೆಗಳು 15 ದಿನದಲ್ಲಿ ಈಡೇರಿಕೆಯಾಗದಿದ್ದಲ್ಲಿ ದಸಂಸ ನೇತೃತ್ವದಲ್ಲಿ ನೊಂದ ಕುಟುಂಬದವರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪೌರಸೇವಾ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಅಣ್ಣಯ್ಯ ಮಾತನಾಡಿ, ನಿತ್ಯ ನಗರದ ಸ್ವಚ್ಛ್ಚತೆಗಾಗಿ ದುಡಿಯುವ ಪೌರ ಕಾರ್ಮಿಕರಿಗೆ ಸರಕಾರದ ಸವಲತ್ತುಗಳು ಆವಶ್ಯವಿದೆ. ಕೆಲವು ಕುಟುಂಬಗಳು ವಾಸಕ್ಕೂ ಮನೆ ಇಲ್ಲದೆ ಪರಿತಪಿಸುತಿದ್ದಾರೆ. ಅಂತಹವರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ನಗರದ ಜನರ ಹಿತ ಕಾಪಾಡುತ್ತಿರುವ ಕುಟುಂಬಗಳಿಗೆ ಸೂರು ಒದಗಿಸುವಂತೆ ಆಗ್ರಹಿಸಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಂತಮ್ಮ, ಜಿಲ್ಲಾಧ್ಯಕ್ಷ ಗುರುಮೂರ್ತಿ, ನಗರಾಧ್ಯಕ್ಷ ವಿ.ಲಕ್ಷಣ್, ಪ್ರವೀಣ್‌ಕುಮಾರ್, ಪ್ರತಾಪ್, ಪ್ರಭು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News